ಸುದ್ದಿಕಿರಣ ವರದಿ
ಮಂಗಳವಾರ, ಮೇ 3
ಮುಸ್ಲಿಮರಿಂದ ರಮ್ಜಾನ್ ಆಚರಣೆ
ಉಡುಪಿ: ಮುಸ್ಲಿಂ ಬಾಂಧವರು ಮಂಗಳವಾರ ರಮ್ಜಾನ್ (ಈದುಲ್ ಫಿತ್ರ್) ಹಬ್ಬ ಆಚರಿಸಿದರು. ಆ ಮೂಲಕ ಕಳೆದ 30 ದಿನಗಳಿಂದ ಆಚರಿಸಿದ್ದ ಉಪವಾಸ ವ್ರತ ಸಮಾಪನಗೊಳಿಸಿದರು.
ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷ ಸರಳವಾಗಿ ಆಚರಿಸಲಾಗಿದ್ದ ಈದುಲ್ ಫಿತ್ರ್ ಈ ಬಾರಿ ಸಾಂಪ್ರದಾಯಿಕ ಶ್ರದ್ಧಾಭಕ್ತಿಯಿಂದ ಸಂಭ್ರಮದಿಂದ ಆಚರಿಸಲಾಯಿತು.
ಜಿಲ್ಲೆಯ ಎಲ್ಲಾ ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನ, ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡಲಾಯಿತು. ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಈದ್ ನಮಾಝ್ ಮತ್ತು ಖುತ್ಬಾ ನೆರವೇರಿತು.
ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರು. ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರಿಗಾಗಿ ಪ್ರಾರ್ಥಿಸಿದರು. ಪರಸ್ಪರ ಹಸ್ತಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ವಿನಿಮಯ, ಸಿಹಿ ಹಂಚಿ ಸಂಭ್ರಮಿಸಿದರು.
ಮುಸ್ಲಿಮ್ ಒಕ್ಕೂಟ ವತಿಯಿಂದ ಸಿಹಿ ವಿತರಣೆ
ಈದುಲ್ ಫಿತ್ರ್ (ರಮ್ಜಾನ್) ಹಬ್ಬದ ನಮಾಜ್ ಬಳಿಕ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾಪು ತಂಡ, ಕಾಪು ತಾಲೂಕು ಅಧ್ಯಕ್ಷ ಶಬೀಹ್ ಅಹಮದ್ ಖಾಜಿ ನೇತೃತ್ವದಲ್ಲಿ ಕಾಪು ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಿಂದ ಕಾಪು ಪೊಲೀಸ್ ಠಾಣೆ ತನಕದ ಹಿಂದೂ ಸಹೋದರರ ವ್ಯಾಪಾರ ಮಳಿಗೆಗಳಿಗೆ ಭೇಟಿ ನೀಡಿ ಸೌಹಾರ್ದತೆ ಸಂದೇಶದೊಂದಿಗೆ ಸಿಹಿತಿಂಡಿಯನ್ನು ಹಂಚಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್ ಹಾಗೂ ಠಾಣಾಧಿಕಾರಿ ರಾಘವೇಂದ್ರ ಮಾತನಾಡಿ, ಇಂಥ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಪ್ರೀತಿ, ಪ್ರೇಮ, ಸಹೋದರತ್ವ ಗಟ್ಟಿಯಾಗುತ್ತದೆ ಎಂದರು.
ಹಿಂದೂ- ಮುಸ್ಲಿಮರು ಈ ದೇಶದಲ್ಲಿ ಹಿಂದಿನಿಂದಲೂ ಅನೋನ್ಯತೆಯಿಂದಿದ್ದು, ಮುಂದಿನ ದಿನಗಳಲ್ಲೂ ನಮ್ಮ- ನಿಮ್ಮ ಸಂಬಂಧ ಹೀಗೇ ಇರಲಿ ಎಂದು ಉದ್ಯಮಿ ಹರೀಶ್ ನಾಯಕ್ ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಅನ್ವರ್ ಅಲಿ ಕಾಪು, ಪದಾಧಿಕಾರಿಗಳಾದ ಮುಹಮ್ಮದ್ ಇಕ್ಬಾಲ್ ಮಜೂರು, ನಸೀರ್ ಅಹಮ್ಮದ್, ಮುಷ್ತಾಕ್ ಇಬ್ರಾಹಿಮ್ ಮೊದಲಾದವರಿದ್ದರು