ಸುದ್ದಿಕಿರಣ ವರದಿ
ಭಾನುವಾರ, ಜನವರಿ 2, 2022
ಮಠ ಮಂದಿರಗಳ ಆಧ್ಯಾತ್ಮಿಕ ಕಾರ್ಯಕ್ಕೆ ಯಕ್ಷಗಾನ ಪೂರಕ
ಮೂಡುಬಿದಿರೆ: ಮಠ ಮಂದಿರಗಳು ನಡೆಸುವ ಆಧ್ಯಾತ್ಮಿಕ ಕಾರ್ಯಗಳಿಗೆ ಯಕ್ಷಗಾನ ಪೂರಕ ಎಂದು ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕರು ಹೇಳಿದರು.
ಉಡುಪಿ ಯಕ್ಷಗಾನ ಕಲಾರಂಗ ಹೊರತಂದ ಯಕ್ಷಗಾನ ಕಲಾವಿದರ ವಿಳಾಸ, ದೂರವಾಣಿ ಸಂಖ್ಯೆಗಳುಳ್ಳ ಯಕ್ಷ ನಿಧಿ ಡೈರಿಯನ್ನು ಭಾನುವಾರ ಶ್ರೀಮಠದಲ್ಲಿ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ಯಕ್ಷಗಾನ ಕಲಾರಂಗದ ಕಲೆ- ಕಲಾವಿದರ ಕ್ಷೇಮ ಚಿಂತನೆ ಮತ್ತು ಸಮಾಜಮುಖಿ ಕೆಲಸಗಳನ್ನು ಶ್ಲಾಘಿಸಿದರು.
ಮಠ- ಮಂದಿರಗಳು ಆಧ್ಯಾತ್ಮಿಕ ಅನುಸಂಧಾನದ ಕಾರ್ಯವನ್ನು ಪೂಜೆ, ಧಾರ್ಮಿಕ ಉಪನ್ಯಾಸಗಳ ಮೂಲಕ ಮಾಡಿದರೆ, ಯಕ್ಷಗಾನ ಭಾಗವತ, ಪುರಾಣಾದಿಗಳ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
ಕಲಾರಂಗದ ಚಟುವಟಿಕೆಗಳಿಗೆ ನಮ್ಮ ಮಠದ ಸಹಕಾರ ಸದಾ ಲಭ್ಯವಿದೆ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಧನಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಕಲಾಪೋಷಕ ಕೆ. ಶ್ರೀಪತಿ ಭಟ್, ಯಕ್ಷಗಾನ ಸಂಘಟಕ ಶಾಂತಾರಾಮ ಕುಡ್ವ, ಉದ್ಯಮಿ ಯು. ವಿಶ್ವನಾಥ ಶೆಣೈ ಅಭ್ಯಾಗತರಾಗಿದ್ದರು.
ಸಂಸ್ಥೆ ಉಪಾಧ್ಯಕ್ಷರಾ ಎಸ್. ವಿ. ಭಟ್ ಮತ್ತು ಪಿ. ಕಿಶನ್ ಹೆಗ್ಡೆ, ಪದಾಧಿಕಾರಿಗಳಾದ ಮನೋಹರ ಕೆ., ಎಚ್. ಎನ್. ಶೃಂಗೇಶ್ವರ, ಭುವನಪ್ರಸಾದ್ ಹೆಗ್ಡೆ, ಅನಂತರಾಜ್ ಉಪಾಧ್ಯ, ನಟರಾಜ್ ಉಪಾಧ್ಯ, ಕಿಶೋರ್ ಸಿ. ಉದ್ಯಾವರ, ಎಚ್. ಎನ್. ವೆಂಕಟೇಶ್ವರ ಇದ್ದರು.
ಕಟೀಲು ಮೇಳದ ಕಲಾವಿದ ಶ್ರೀನಿವಾಸ ಅವರಿಗೆ ಡೈರಿ ನೀಡಲಾಯಿತು.
ಕಲಾವಿದ, ಸಂಘಟಕ ದೇವಾನಂದ ಭಟ್ ಬೆಳುವಾಯಿ ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು.
ಕಲಾರಂಗ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು.