Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ಯುವಶಕ್ತಿಯ ಸದ್ಬಳಕೆಗೆ ಕರೆ

ಯುವಶಕ್ತಿಯ ಸದ್ಬಳಕೆಗೆ ಕರೆ

ಯುವಶಕ್ತಿಯ ಸದ್ಬಳಕೆಗೆ ಕರೆ
ಉಡುಪಿ: ಜಿಲ್ಲೆಯ ಯುವಕ ಸಂಘಗಳ ಯುವಜನತೆ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮತ್ತು ಅವರಿಗೆ ಅಗತ್ಯ ತರಬೇತಿ ನೀಡುವ ಮೂಲಕ ಅವರಲ್ಲಿರುವ ಯುವಶಕ್ತಿಯನ್ನು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳುವ ಕಾರ್ಯಕ್ರಮ ರೂಪಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ನೆಹರು ಯುವಕೇಂದ್ರದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೆಹರು ಯುವಕೇಂದ್ರ ಮೂಲಕ ಜಿಲ್ಲೆಯಲ್ಲಿ ನೋಂದಣಿಯಾಗಿರುವ ಯುವಕ ಸಂಘಗಳ ಸದಸ್ಯರಿಗೆ ಅವರಲ್ಲಿನ ಸಮಾಜಸೇವೆ ಗುಣ, ಕೌಶಲ್ಯ ಮತ್ತು ಸಾಹಸ ಪ್ರವೃತ್ತಿ ಅಭಿವೃದ್ಧಿಗೊಳಿಸುವಂತೆ ಚಟುವಟಿಕೆ ಏರ್ಪಡಿಸಿ. ಯುವಕ- ಯುವತಿಯರಿಗೆ ವಿಕೋಪ ನಿರ್ವಹಣೆ ಸೇರಿದಂತೆ ಅತ್ಯಾವಶ್ಯಕ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ಸಮಾಜದ ನೆರವಿಗೆ ಧಾವಿಸುವ ತರಬೇತಿ ಕಾರ್ಯಕ್ರಮ ಆಯೋಜಿಸಿ, ತುರ್ತು ಸಂದರ್ಭದಲ್ಲಿ ಈ ರೀತಿ ತರಬೇತಿ ಪಡೆದ ಯುವಕರ ಸೇವೆಯನ್ನು ಜಿಲ್ಲಾಡಳಿತದ ನೆರವಿಗೆ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.

ನೆಹರು ಯುವ ಕೇಂದ್ರದಿಂದ ಸಿದ್ಧಪಡಿಸುವ ವಾರ್ಷಿಕ ಕಾರ್ಯಕ್ರಮಗಳಲ್ಲಿ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಯುವಕರು ತೊಡಗುವ ಕಾರ್ಯಕ್ರಮ ರೂಪಿಸಿ, ಉತ್ತಮ ಕಾರ್ಯನಿರ್ವಹಿಸುವ ಯುವ ತಂಡಗಳನ್ನು ಸೂಕ್ತ ರೀತಿಯಲ್ಲಿ ಪ್ರೋತ್ಸಾಹಿಸಿ, ಯುವಕರಲ್ಲಿ ಆತ್ಮವಿಶ್ವಾಸ ಮೂಡಿಸುವ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಗತ್ಯ ತರಬೇತಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುವ ತರಬೇತಿ, ತಮ್ಮ ಗ್ರಾಮಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ಸೇರಿದಂತೆ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಆ ಸೌಲಭ್ಯಗಳನ್ನು ಜನರಿಗೆ ದೊರಕಿಸುವ ಕಾರ್ಯಕ್ರಮ ಮತ್ತು ಯುವಕರ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬೆಳವಣಿಗೆಗೆ ಪೂರಕವಾಗುವ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಯುವಕ ಸಂಘಗಳ ಮಾಹಿತಿ ಸಿದ್ಧಪಡಿಸಿಟ್ಟುಕೊಂಡು ತುರ್ತು ಸಂದರ್ಭದಲ್ಲಿ ಅವರ ನೆರವು ಪಡೆಯಬೇಕು. ಯುವಜನತೆ ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯರ್ಥವಾಗಿ ಕಾಲ ಕಳೆಯದೆ, ಸಾಮಾಜಿಕ ಕಾರ್ಯಗಳಿಂದ ಸಮಾಜಕ್ಕೆ ಅಗತ್ಯ ನೆರವು ನೀಡಬೇಕು. ಯುವಕರು ಸದಾ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡು ತಮ್ಮಲ್ಲಿರುವ ಯುವಶಕ್ತಿ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ತುರ್ತು ಸಂದರ್ಭಗಳಲ್ಲಿ ಜಿಲ್ಲಾಡಳಿತ ನೀಡುವ ಕರೆಗೆ ತಕ್ಷಣ ಸ್ಪಂದಿಸಬೇಕು ಎಂದು ಡಿಸಿ ಜಗದೀಶ್ ಹೇಳಿದರು.

ಜಿಲ್ಲಾ ನೆಹರು ಯುವ ಕೇಂದ್ರದ 2020- 21ನೇ ಸಾಲಿನಲ್ಲಿ ಏರ್ಪಡಿಸಲಾಗುವ ವಾರ್ಷಿಕ ಕಾರ್ಯಕ್ರಮಗಳ ಕ್ರಿಯಾಯೋಜನೆಗೆ ಜಿಲ್ಲಾಧಿಕಾರಿ ಅನುಮೋದನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನೆಹರು ಯುವ ಕೇಂದ್ರದ ವಿಷ್ಣುಮೂರ್ತಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ವಿಲ್ಪ್ರೆಡ್ ಡಿ’ಸೋಜಾ ಸ್ವಾಗತಿಸಿ, ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!