Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಯೋಗದಿಂದ ದೈಹಿಕ ಮತ್ತು ಮಾನಸಿಕ ಸದೃಢತೆ

ಯೋಗದಿಂದ ದೈಹಿಕ ಮತ್ತು ಮಾನಸಿಕ ಸದೃಢತೆ

ಉಡುಪಿ: ಹಿರಿಯರು ಮತ್ತು ಋಷಿಮುನಿಗಳ ಸಾವಿರಾರು ವರ್ಷದ ಅನ್ವೇಷಣೆಯ ಪರಿಣಾಮವಾಗಿ ಇಂದು ನಮಗೆ ಯೋಗದ ಫಲ ದೊರಕಿದೆ. ಈ ಪರಿಣಾಮವನ್ನು ಒತ್ತಡ ಎದುರಾದಾಗ ಚಂಚಲತೆಗೆ ಒಳಗಾಗದೆ ದೇಹದೊಂದಿಗೆ ಮನಸ್ಸನ್ನು ಕೇಂದ್ರೀಕರಿಸಲು ಯೋಗಾಭ್ಯಾಸ ರೂಢಿಸಿಕೊಂಡಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಸೋಮವಾರ ನಗರದ ಆಯುಷ್ ಇಲಾಖೆಯಲ್ಲಿ ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಉಡುಪಿ ಸಹಯೋಗದೊಂದಿಗೆ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಲಾದ ಆನ್ ಲೈನ್ ಮೂಲಕ ಯೋಗ ಶಿಕ್ಷಣ ಉದ್ಘಾಟಿಸಿ ಮಾತನಾಡಿದರು.

2015ರ ಜೂ. 21ರಿಂದ ಯೋಗ ದಿನವನ್ನು ವಿಶೇಷ ರೀತಿಯ ಸಾಮಾಜಿಕ ಸಂದೇಶದೊಂದಿಗೆ ಆಚರಿಸುತ್ತಾ ಬರಲಾಗುತ್ತಿದ್ದು, ಕೋವಿಡ್ ಸಂದಿಗ್ಧತೆಯಲ್ಲಿ ಈ ವರ್ಷವೂ ಮನೆಯಲ್ಲಿರಿ- ಯೋಗದೊಂದಿಗೆ ಇರಿ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

ಹಿರಿಯರು ನಮಗಾಗಿ ಕೊಟ್ಟ ಇಂಥ ಕೊಡುಗೆ ರೂಢಿಸಿಕೊಂಡು ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮ ಕರ್ತವ್ಯ. ಆದ್ದರಿಂದ ಯೋಗದ ಬಗ್ಗೆ ಜನಸಾಮಾನ್ಯರಿಗೂ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಆಯುಷ್ ಇಲಾಖೆ ವಿವಿಧ ತರಬೇತಿ ಹಮ್ಮಿಕೊಳ್ಳಬೇಕು. ಕೋವಿಡ್ ಹೋಗಲಾಡಿಸಲು ಯೋಗದೊಂದಿಗೆ ಆಯುರ್ವೇದದ ಮಹತ್ವವನ್ನು ಜನರಿಗೆ ತಿಳಿಸಬೇಕು ಎಂದರು.

ಜಿಲ್ಲೆಯಲ್ಲಿ ಯೋಗ ಕೇಂದ್ರ ನಡೆಸಲು ಆಯುಷ್ ಇಲಾಖೆಯಲ್ಲಿರುವ ಕೊರತೆಯನ್ನು ವೈದ್ಯರು ತಿಳಿಸಿದ್ದಲ್ಲಿ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕೇಂದ್ರ ಸರ್ಕಾರದ ಮೂಲಕ ಇನ್ನೂ ಹೆಚ್ಚಿನ ರೀತಿಯಲ್ಲಿ ಜಿಲ್ಲೆಗೆ ಒದಗಿಸಲು ಸಹಕಾರ ನೀಡುವುದಾಗಿ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ. ಪ್ರಕಾಶ್ ನಾಯ್ಕ್, ಕೊರೊನಾ ಜಾಗೃತಿಯೊಂದಿಗೆ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಯೋಗ ತರಬೇತಿ ನೀಡಲಾಗುತ್ತಿದೆ ಎಂದರು.

ಎಸ್.ಪಿಜಿಎಸ್.ಎಸ್ ಜಿಲ್ಲಾ ಶಿಕ್ಷಣ ಪ್ರಮುಖೆ ಲಲಿತಾ ಕೆದ್ಲಾಯ ಇದ್ದರು. ವೀಣಾ ಕಾರಂತ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!