Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಯೋಗ ಬದುಕಿನ ಅವಿಭಾಜ್ಯ ಅಂಗವಾಗಲಿ

ಯೋಗ ಬದುಕಿನ ಅವಿಭಾಜ್ಯ ಅಂಗವಾಗಲಿ

ಉಡುಪಿ: ದೇಶದ ಭವ್ಯ ಸಂಸ್ಕೃತಿಯ ಪ್ರತೀಕವಾಗಿರುವ ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಖ್ಯಾತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಜೂ. 21ನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ವಿಶ್ವದಾದ್ಯಂತ ಆಚರಿಸುವುದು ಭಾರತೀಯರಿಗೆ ಹೆಮ್ಮೆಯ ವಿಚಾರ. ಯೋಗಾಭ್ಯಾಸ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ಎಲ್ಲರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಶಿಸಿದರು.

ಅಂತಾರಾಷ್ಟ್ರೀಯ ಯೋಗ ದಿನ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಯೋಗ, ಭಾರತೀಯ ಜೀವನ ಪದ್ಧತಿಯ ಪ್ರಮುಖ ಅಂಗ. ಯೋಗಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ವಿಕಸನದ ಜೊತೆಗೆ ದೈನಂದಿನ ಬದುಕಿನಲ್ಲಿ ಲವಲವಿಕೆ, ಚೈತನ್ಯ ಕಂಡುಕೊಳ್ಳಲು ಸಾಧ್ಯ. ಪ್ರಸಕ್ತ ಕೊರೊನಾ ಸಂಕಷ್ಟದ ಸಂದರ್ಭದಲ್ಲಿಯೂ ಜನತೆ ಆರೋಗ್ಯದ ಕಾಳಜಿಯಿಂದ ಮನೆ ಮನೆಗಳಲ್ಲಿ ಸ್ವಯಂಪ್ರೇರಿತರಾಗಿ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳುವುದು ಇಂದಿನ ಅಗತ್ಯ ಎಂದು ಕುಯಿಲಾಡಿ ಪ್ರತಿಪಾದಿಸಿದರು.

ಅಧ್ಯಕ್ಷತೆ ವಹಿಸಿದ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಹೆಣ್ಣು ಕುಟುಂಬದ ಕಣ್ಣು ಇದ್ದಂತೆ. ಕುಟುಂಬದ ಸದಸ್ಯರು ಯೋಗಾಭ್ಯಾಸವನ್ನು ದಿನಚರಿಯ ಭಾಗವಾಗಿ ಅಳವಡಿಸಿಕೊಳ್ಳುವಂತೆ ಮಹಿಳೆಯರು ಪ್ರೇರಣೆ ನೀಡುವುದು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ ಎಂದರು.

ಯೋಗ ಶಿಕ್ಷಕಿ, ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷೆ ಲೀಲಾ ಆರ್. ಅಮೀನ್ ಮತ್ತು ಯೋಗ ಸಹಶಿಕ್ಷಕಿ, ಉಡುಪಿ ನಗರಸಭಾ ನಾಮನಿರ್ದೇಶಿತ ಸದಸ್ಯೆ ಸುಭೇದಾ ಯೋಗ ತರಗತಿ ನಡೆಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಕಚೇರಿ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕಷ್ಣ ಶೆಟ್ಟಿ, ಕೋಶಾಧಿಕಾರಿ ರಜನಿ ಹೆಬ್ಬಾರ್ ಮತ್ತು ಮಹಿಳಾ ಮೋರ್ಚಾ ಜಿಲ್ಲಾ ಪದಾಧಿಕಾರಿಗಳು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!