Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಜನಸಾಮಾನ್ಯರ ಕಲ್ಯಾಣ ಯೋಜನೆ ಅನುಷ್ಠಾನಗೊಳಿಸಲು ಸೂಚನೆ

ಜನಸಾಮಾನ್ಯರ ಕಲ್ಯಾಣ ಯೋಜನೆ ಅನುಷ್ಠಾನಗೊಳಿಸಲು ಸೂಚನೆ

ಉಡುಪಿ: ಕೊರೊನಾದಿಂದಾಗಿ ಪ್ರಸ್ತುತ ಸಾಲಿನ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಅನುಷ್ಠಾನ ನಿಗದಿತ ಗುರಿ ಸಾಧಿಸಿಲ್ಲ. ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಪೂರ್ಣ ಪ್ರಮಾಣದ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ. ಟಿ. ರೇಜು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರಕಾರ ಪ್ರಸ್ತುತ ಬಜೆಟ್ ನಲ್ಲಿ ಜನಸಾಮಾನ್ಯರ ಕಲ್ಯಾಣ ಯೋಜನೆ ಸೇರಿದಂತೆ ಅನೇಕ ಯೋಜನೆ, ಕಾರ್ಯಕ್ರಮ ರೂಪಿಸಿದೆ ಎಂದರು.

ಜಿಲ್ಲೆಯಲ್ಲಿ ಕಳೆದ 4 ತಿಂಗಳಿಂದ ಹೆಚ್ಚಿನ ಮಳೆಯಿಂದಾಗಿ ಉಂಟಾದ ನೆರೆಯಿಂದಾದ ನಷ್ಟದ ಬಗ್ಗೆ ಮಾಹಿತಿ ಪಡೆದ ಅವರು, ಮಳೆ ಹಾನಿಗೊಳಗಾದ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಜನಸಾಮಾನ್ಯರಿಗೆ ಅಗತ್ಯ ನೆರವು ಕಲ್ಪಿಸಬೇಕು. ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಕುಡಿಯುವ ನೀರಿನ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಂಡು, ಶೀಘ್ರ ಕಾಮಗಾರಿ ಪೂರ್ಣಗೊಳಿಸುವುದರೊಂದಿಗೆ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಬಡ ಜನರಿಗೆ ಉದ್ಯೋಗ ನೀಡುವ ಜೊತೆಗೆ ಶಾಶ್ವತ ಅಭಿವೃದ್ಧಿಗಾಗಿ ಕಾಮಗಾರಿ ಕೈಗೊಳ್ಳಬೇಕು. ಕೂಲಿ ಕಾರ್ಮಿಕರಿಗೆ ನಿಗದಿತ ಅವಧಿಯಲ್ಲಿ ಕೂಲಿ ಹಣ ನೀಡಬೇಕು ಎಂದರು.

ಮಹಿಳೆಯರು ಸ್ವ ಉದ್ಯೋಗ ಕೈಗೊಂಡು ಸ್ವಾವಲಂಬಿಗಳಾಗಲು ಯೋಜನೆ ಜಾರಿಗೆ ತರಲಾಗಿದ್ದು, ಅದನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದರೊಂದಿಗೆ ಅವರು ಆರ್ಥಿಕವಾಗಿ ಸಬಲರಾಗಬೇಕು. ಅಂಥವರ ಯಶೋಗಾಥೆ ಪ್ರಚುರಪಡಿಸಬೇಕು ಎಂದರು.

ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿ ಸೇರಿದಂತೆ ಅಂಗನವಾಡಿ ಮಕ್ಕಳಿಗೆ ಹಾಲಿನ ಪುಡಿ ವಿತರಣೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕೆಂದು ತಿಳಿಸಿದರು.

ಜಿಲ್ಲೆಯಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ಅವೈಜ್ಞಾನಿಕವಾಗಿ ನಿಯಮ ಪಾಲಿಸದೇ ಅಕ್ರಮವಾಗಿ ನಡೆಸುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿದೆ. ಅವುಗಳ ಬಗ್ಗೆ ಎಚ್ಚರಿಕೆ ಕ್ರಮ ವಹಿಸಬೇಕೆಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಕಳೆದ ಎರಡು ವರ್ಷದ ಅವಧಿಯಲ್ಲಿ ಮೀನುಗಾರ ಮಹಿಳೆಯರಿಗೆ ನೀಡಿದ್ದ ಅಲ್ಪಾವಧಿ ಸಾಲ ಮನ್ನಾ ಮಾಡಲು 38 ಕೋ. ರೂ. ಬಿಡುಗಡೆಯಾಗಿದ್ದು, ಅದರಲ್ಲಿ 31 ಕೋ. ಮಾತ್ರ 11 ಸಾವಿರ ಮಂದಿಯ ಖಾತೆಗೆ ಜಮಾ ಆಗಿದೆ. ಬಾಕಿ ಉಳಿದ 4,050 ಮಂದಿಯ ಆಧಾರ್ ಲಿಂಕ್ ಆಗದ ಕಾರಣ ಜಮೆಯಾಗಿಲ್ಲ. ಈ ಬಗ್ಗೆ ಕ್ರಮ ವಹಿಸಬೇಕು ಎಂದರು.

ರಾಜ್ಯ ಮಟ್ಟದಲ್ಲಿ ಜಿಲ್ಲೆಯಲ್ಲಿ ಬರುವ ಮಾಹಿತಿ ಆಧಾರದ ಮೇಲೆ ಮುಂಬರುವ ಬಜೆಟ್ ನಲ್ಲಿ ಯೋಜನೆ ತಯಾರಿಸಲಾಗುವುದು. ಆದ್ದರಿಂದ ಪ್ರತೀ ಇಲಾಖೆಯವರು ತಮ್ಮ ಇಲಾಖೆಗಳಲ್ಲಿನ ಯೋಜನೆಗಳ ಮಾಹಿತಿಯನ್ನು ನಿಗದಿತ ಸಮಯದಲ್ಲಿ ರಾಜ್ಯ ಮಟ್ಟದ ಕಚೇರಿಗೆ ತಲುಪಿಸಲು ಸೂಚಿಸಿದರು.

ವಿಧಾನಸಭಾಧಿವೇಶನದಲ್ಲಿ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳ ಬಗ್ಗೆ ಉತ್ತರವನ್ನು ವಿಳಂಬವಿಲ್ಲದೇ ನಿಖರ ಮಾಹಿತಿ ಕಳುಹಿಸಬೇಕು. ಸಿ.ಆರ್.ಝಡ್ ಹಾಗೂ ನಾನ್ ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆ ಸೇರಿದಂತೆ ಇತರ ಗಣಿಗಾರಿಕೆ ಬಗ್ಗೆ ಮಾಹಿತಿ ಪಡೆದ ಅವರು, ಸರಕಾರದ ನಿಯಮಾನುಸಾರ ಎಲ್ಲಾ ರೀತಿಯ ಸಾಂಪ್ರದಾಯಿಕ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲು ತಿಳಿಸಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಅವಕಾಶಗಳಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಅಗತ್ಯ ಮೂಲಭೂತ ಅಭಿವೃದ್ಧಿ ಕಾಮಗಾರಿ ಕಲ್ಪಿಸಲು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ ಭಟ್ ವೈ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!