ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಿ.ಎಂ. ಯಡಿಯೂರಪ್ಪ ಘೋಷಿಸಿದ ಬೆನ್ನಲ್ಲೇ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು. ರಾಜ್ಯಪಾಲ ಗೆಹ್ಲೋಟ್ ರಾಜೀನಾಮೆ ಅಂಗೀಕರಿಸಿದ್ದಾರೆ.
ಆ ಮೂಲಕ ಕರ್ನಾಟಕದಲ್ಲಿ ಎರಡು ವರ್ಷ ಅವಧಿಯ ಬಿ.ಎಸ್.ವೈ. ಆಡಳಿತ ಕೊನೆಗೊಂಡಂತಾಗಿದೆ.
ಸಾಧನಾ ಸಮಾವೇಶದ ವೇಳೆಯಲ್ಲಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದ ಯಡಿಯೂರಪ್ಪ, ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಘೋಷಣೆ ಮಾಡಿದ್ದರು.
ಅಪರಾಹ್ನ 3 ಗಂಟೆಗೆ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ್ದ ಯಡಿಯೂರಪ್ಪ, ತರಾತುರಿಯಲ್ಲಿ ರಾಜಭವನಕ್ಕೆ ತೆರಳಿ ರಾಜೀನಾಮೆಯನ್ನು ಸಲ್ಲಿಸಿದರು.
ಹೈಕಮಾಂಡ್ ನಿರ್ಧಾರಕ್ಕೆ ತಾನು ಬದ್ದನಾಗಿದ್ದು, ರಾಜೀನಾಮೆ ಸಲ್ಲಿಸುತ್ತೇನೆ ಎಂದಿದ್ದ ಯಡಿಯೂರಪ್ಪ, ಅದರಂತೆಯೇ ನಡೆದುಕೊಂಡಿದ್ದಾರೆ.
ಮುಂದಿನ ಮುಖ್ಯಮಂತ್ರಿಯ ನೇಮಕ ಆಗುವ ವರೆಗೆ ಬಿ.ಎಸ್.ಯಡಿಯೂರಪ್ಪ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ.