Monday, August 15, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಕಸ್ತೂರಿ ರಂಗನ್ ವರದಿ: ರಾಜ್ಯ ನಿಲುವಿನ ಸ್ಪಷ್ಟನೆ

ಕಸ್ತೂರಿ ರಂಗನ್ ವರದಿ: ರಾಜ್ಯ ನಿಲುವಿನ ಸ್ಪಷ್ಟನೆ

ಸುದ್ದಿಕಿರಣ ವರದಿ
ಸೋಮವಾರ, ಜುಲೈ 25

ಕಸ್ತೂರಿ ರಂಗನ್ ವರದಿ: ರಾಜ್ಯ ನಿಲುವಿನ ಸ್ಪಷ್ಟನೆ
ನವದೆಹಲಿ: ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯದ ನಿಯೋಗ ಸೋಮವಾರ ಭೇಟಿ ಮಾಡಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಸ್ತೂರಿ ರಂಗನ್ ವರದಿ ಬಗ್ಗೆ ರಾಜ್ಯದ ನಿಲುವನ್ನು ಸ್ಪಷ್ಟಪಡಿಸಲಾಗಿದೆ. ಮೊದಲಿದ್ದ ಗಾಡ್ಗಿಳ್ ಸಮಿತಿ ವರದಿಯನ್ನು ಎಲ್ಲ ರಾಜ್ಯಗಳೂ ವಿರೋಧಿಸಿದ್ದವು. ನಂತರ ಕಸ್ತೂರಿ ರಂಗನ್ ವರದಿ ಬಂತು. ಈ ವರದಿಯಲ್ಲಿ ಯಾವುದೇ ಭೂ ಸಮೀಕ್ಷೆ ಮಾಡದೇ, ಕೇವಲ ಸ್ಯಾಟಿಲೈಟ್ ಸಮೀಕ್ಷೆ ನಡೆಸಲಾಗಿದ್ದು, ಹಸಿರು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಹೊರಟಿದ್ದಾರೆ.

ಅಲ್ಲಿಯ ಜನಜೀವನ, ಪರಿಸರ ಒಟ್ಟಾಗಿದ್ದು, ಹಸಿರನ್ನು ಅವಲಂಬಿಸಿರುವ ಜನರಿದ್ದಾರೆ. ಕಾಫಿ, ಅಡಿಕೆ , ತೆಂಗು, ರಬ್ಬರ್ ತೋಟಗಳಿದ್ದು, ಅಲ್ಲಿಯ ಜನ ಹಸಿರನ್ನು ಉಳಿಸಿ ಬೆಳೆಸಿದ್ದಾರೆ. ಆದ್ದರಿಂದ ಆ ಪ್ರದೇಶದ ಭೂಮಿ ಸಮೀಕ್ಷೆ ನಡೆಸದೇ ವಾಸ್ತವಾಂಶ ತಿಳಿಯುವುದಿಲ್ಲ ಎಂಬುದು ರಾಜ್ಯದ ವಾದ ಎಂದರು.

ರಾಜ್ಯದ ಜೈವಿಕ ವೈವಿಧ್ಯತೆ ನೀತಿ ಪ್ರಕಾರ ವರದಿ ತಯಾರಿಸುವಾಗ ಸ್ಥಳೀಯ ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅಭಿಪ್ರಾಯ ಪಡೆದಿಲ್ಲ. ಒಟ್ಟಾರೆ ಸ್ಥಳೀಯ ಜನರ ಅಭಿಪ್ರಾಯ ಪಡೆಯದೇ ಕಸ್ತೂರಿ ರಂಗನ್ ವರದಿ ಸಿದ್ಧಪಡಿಸಲಾಗಿದೆ. ಅಲ್ಲಿನ ನೈಸರ್ಗಿಕ ಹಾಗೂ ಸಾಂಸ್ಕೃತಿಕ ಭೂ ಪ್ರದೇಶವನ್ನು ಪ್ರತ್ಯೇಕವಾಗಿ ಗುರುತಿಸಲು ವರದಿಯ ವಿಚಾರಣಾ ಉಲ್ಲೇಖಗಳಲ್ಲಿದ್ದರೂ ಅದನ್ನು ಪ್ರತ್ಯೇಕಿಸಿಲ್ಲ ಎಂದರು.

ಉನ್ನತ ಮಟ್ಟದ ಸಮಿತಿ ರಚನೆ
ನಿವೃತ್ತ ಐಎಫ್.ಎಸ್ ಅಧಿಕಾರಿ ಸಂಜಯ್ ಕುಮಾರ್ ನೇತೃತ್ವದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕರು, ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಡೈರೆಕ್ಟರ್ ಜನರಲ್, ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ಪ್ರಾಧ್ಯಾಪಕ ಆರ್. ಸಿ. ಕುಮಾರ್, ಪರಿಸರ ಸೂಕ್ಷ್ಮ ವಲಯ ನಿರ್ದೇಶಕರ ಸಲಹೆಗಾರರು ಮತ್ತು ಸಂಚಾಲಕರು ಅವರನ್ನೊಳಗೊಂಡ ಸಮಿತಿ ರಚಿಸಿ, ಒಂದು ವರ್ಷದ ಅವಧಿ ನೀಡಲಾಗಿದೆ.

ಜನರೊಂದಿಗೆ ಮಾತನಾಡಿ ಅಲ್ಲಿಯ ಜನ ಬೆಳೆದಿರುವ ಬೆಳೆ, ಸಾಂಸ್ಕೃತಿಕ ಹಾಗೂ ನೈಸರ್ಗಿಕ ಭೂ ಪ್ರದೇಶದ ಕುರಿತು ಸಂಪೂರ್ಣ ಅಧ್ಯಯನ ಕೈಗೊಂಡು ವರದಿ ನೀಡಬೇಕು. ಅಲ್ಲಿಯ ವರೆಗೆ ಈ ಅಧಿಸೂಚನೆಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುವುದಿಲ್ಲ ಎನ್ನುವ ವಿಚಾರ ತಿಳಿಸಿದ್ದಾರೆ. ಅದರ ಪ್ರತಿಯನ್ನೂ ನೀಡಿದ್ದಾರೆ.

ಪಶ್ಚಿಮ ಘಟ್ಟಗಳಿರುವ ಎಲ್ಲಾ ರಾಜ್ಯಗಳಿಗೆ ಅದನ್ನು ಪ್ರತಿಪಾದಿಸಿ, ಉಳಿಸುವ ಮತ್ತೊಂದು ಅವಕಾಶ ದೊರೆತಿದೆ. ರಾಜ್ಯ ಮಟ್ಟದಲ್ಲೂ ಸಮಿತಿಯ ವಿಚಾರಣಾ ಉಲ್ಲೇಖಗಳ ಆಧಾರದ ಮೇಲೆ ಉನ್ನತ ಮಟ್ಟದ ಸಮಿತಿಯನ್ನೂ ರಚಿಸಲಾಗುವುದು ಎಂದರು.

ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ
ಈ ಸಮಿತಿ ರಚನೆಯಾದ ಸಂದರ್ಭದಲ್ಲಿ ವಾಸ್ತವಾಂಶ ಸಲ್ಲಿಸುವ ಜೊತೆಗೆ ಎಲ್ಲಾ ಗ್ರಾಮ ಪಂಚಾಯತ್ ಗಳ ಮನದಾಳದ ಆಸೆಯನ್ನು ಮನವರಿಕೆ ಮಾಡಿಕೊಡಲಾಗುವುದು.

ಪ್ರತೀ ಗ್ರಾಮವನ್ನು ಒಂದು ಘಟಕವಾಗಿ ಪರಿಗಣಿಸಿ ಅವರ ಅಹವಾಲು ಕೇಳಬೇಕೆಂದು ಮನವಿ ಮಾಡುತ್ತೇವೆ. ಕಸ್ತೂರಿ ರಂಗನ್ ವರದಿ ಬಹಳ ಅವೈಜ್ಞಾನಿಕವಾಗಿದೆ. ವೈಜ್ಞಾನಿಕವಾಗಿ ಅದನ್ನು ರೂಪಿಸುವ ಸಲುವಾಗಿ ಅಗತ್ಯ ಕ್ರಮ ಕೈಗೊಳ್ಳಲು ಉನ್ನತ ಮಟ್ಟದ ಸಮಿತಿ ರಚನೆಯಾಗಲಿದೆ. ಜನಜೀವನ ಹಾಗೂ ಪರಿಸರವನ್ನು ಉಳಿಸಲು ಅವಕಾಶವಿದೆ. ಜೊತೆಗೆ ವಿವಿಧ ರಾಜ್ಯಗಳ ಜೊತೆಗೂ ಚರ್ಚೆ ಮಾಡಿ ಸಾಮಾನ್ಯ ಕಾರಣಗಳನ್ನು ಚರ್ಚಿಸಲಾಗುವುದು.

ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರಿಗೆ ರಾಜ್ಯಕ್ಕೆ ಭೇಟಿ ನೀಡಿ ಆ ಭಾಗಗಳಲ್ಲಿ ಸಂಚರಿಸಿ ಪರಿಶೀಲಿಸುವಂತೆ ಕೋರಲಾಗಿದೆ. ರಾಜ್ಯಕ್ಕೆ ಭೇಟಿ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಸಂಸದರಾದ ಪ್ರತಾಪಸಿಂಹ ಮತ್ತು ಬಿ. ಎಸ್. ರಾಘವೇಂದ್ರ, ಸಚಿವರಾದ ಗೋವಿಂದ ಕಾರಜೋಳ ಮತ್ತು ಆರಗ ಜ್ಞಾನೇಂದ್ರ, ಶಾಸಕ ಹಾಲಪ್ಪ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಜೀವರಾಜ್ ನಿಯೋಗದಲ್ಲಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!