Wednesday, August 10, 2022
Home ಸಮಾಚಾರ ಜಿಲ್ಲಾ ಸುದ್ದಿ ಉಡುಪಿ ಜಿಲ್ಲೆ 4 ಲಕ್ಷ; ದ.ಕ. 6 ಲಕ್ಷ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಹಾರಾಟ

ಉಡುಪಿ ಜಿಲ್ಲೆ 4 ಲಕ್ಷ; ದ.ಕ. 6 ಲಕ್ಷ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಹಾರಾಟ

ಸುದ್ದಿಕಿರಣ ವರದಿ
ಶನಿವಾರ, ಆಗಸ್ಟ್ 6

ಉಡುಪಿ ಜಿಲ್ಲೆ 4 ಲಕ್ಷ; ದ.ಕ. 6 ಲಕ್ಷ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಹಾರಾಟ
ಉಡುಪಿ: ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಮನೆಗಳು ಹಾಗೂ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ರಾರಾಜಿಸಬೇಕು ಎಂದು ನಿಶ್ಚಯಿಸಲಾಗಿದೆ. ಅದರಂತೆ ಉಡುಪಿ ಜಿಲ್ಲೆಯ 4 ಲಕ್ಷ ಹಾಗೂ ದ.ಕ. ಜಿಲ್ಲೆಯ 6 ಲಕ್ಷ ಮನೆ ಹಾಗೂ ಇತರ ಎಲ್ಲಾ ಕಟ್ಟಡಗಳ ಮೇಲೆ ಈ ತಿಂಗಳ 13ರಿಂದ ಮೂರು ದಿನಗಳ ಕಾಲ ಅಹೋರಾತ್ರಿ ತ್ರಿವರ್ಣ ಧ್ವಜ ಹಾರಾಡಲಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕಾಗಿ ಎಲ್ಲಾ ಜನಪ್ರತಿನಿಧಿಗಳು, ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರ ಯಾಚಿಸುತ್ತಿದ್ದೇವೆ. ಕಾರ್ಯಕ್ರಮಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಈ ತಿಂಗಳ 9ರಿಂದ ರಾಷ್ಟ್ರಧ್ವಜ ವಿತರಣೆಗೆ ಚಾಲನೆ ನೀಡಲಾಗುವುದು ಎಂದರು.

ರಾಷ್ಟ್ರಧ್ವಜಗಳನ್ನು ಸರ್ಕಾರ ಮಾರಾಟ ಮಾಡುತ್ತಿಲ್ಲ. ಸ್ವಸಹಾಯ ಸಂಘಗಳಿಗೆ ಹಾಗೂ ಪಡಿತರ ಅಂಗಡಿಗಳಲ್ಲಿ ಧ್ವಜ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂಗಡಿಗಳಲ್ಲೂ ರಾಷ್ಟ್ರಧ್ವಜ ಲಭ್ಯವಿದ್ದು, 20ರಿಂದ 30 ರೂ. ವರೆಗೂ ದರ ನಿಗದಿ ಮಾಡಲಾಗಿದೆ. ಎಲ್ಲರೂ ಧ್ವಜಗಳನ್ನು ಖರೀದಿಸಬೇಕು ಎಂಬುದು ಆಶಯವಾಗಿದೆ. ಆದರೂ ಏಕರೂಪ ದರ ನಿಗದಿಗೆ ಸ್ವಸಹಾಯ ಗುಂಪುಗಳಿಗೆ ಸೂಚಿಸಲಾಗುವುದು.

ಹರ್ ಘರ್ ತಿರಂಗ್ ಕಾರ್ಯಕ್ರಮ ದೇಶವ್ಯಾಪಿ ನಡೆಯುವ ಕಾರ್ಯಕ್ರಮವಾಗಿದ್ದು, ಆ ಬಗ್ಗೆ ಗೊಂದಲ ಬೇಡ. ಕಾರ್ಯಕ್ರಮ ಶೀರ್ಷಿಕೆಗೆ ಅನ್ಯ ಭಾಷಾ ಪದ ಪ್ರಯೋಗ ಮಾಡಲಾಗಿದೆ ಎಂಬ ಆರೋಪ ಅರ್ಥಹೀನ ಎಂದರು.

ಅತ್ಯಂತ ಸಂಭ್ರಮದಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಮನೆ ಮಂದಿ ಸೇರಿಕೊಂಡು ಆಚರಿಸಬೇಕು. ಅದಕ್ಕಾಗಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಈಗಾಗಲೇ ನಡೆಯುತ್ತಿದೆ. ಆ. 13ರ ಬಳಿಕ ಎಲ್ಲಾ ರಂಗಾಯಣಗಳೂ ಕರ್ನಾಟಕದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿ ಒಂದೊಂದು ಗಂಟೆ ಅವಧಿಯ ನಾಟಕಗಳನ್ನು ಸಿದ್ಧಪಡಿಸಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಂಗಾಯಣ ಯಾತ್ರೆ ನಡೆಯಲಿದ್ದು, ಎಲ್ಲಾ ಜಿಲ್ಲೆಗಳ ಶಾಲಾ ಕಾಲೇಜುಗಳಲ್ಲಿ ನಾಟಕ ಪ್ರದರ್ಶನ ಏರ್ಪಡಿಸಲಾಗುವುದು.

ಕೋವಿಡ್ ಸಂದರ್ಭದಲ್ಲಿ ಎಲ್ಲಾ ರಂಗಾಯಣಗಳ ಅನುದಾನ ಕಡಿತ ಮಾಡಲಾಗಿತ್ತು. ಇದೀಗ ಎಲ್ಲಾ ರಂಗಾಯಣಗಳಿಗೂ ಅನುದಾನ ನೀಡುವಂತೆ ಆರ್ಥಿಕ ಇಲಾಖೆಗೆ ಸೂಚಿಸಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!