Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ರೈತರ ಬೇಡಿಕೆ ಈಡೇರಿಸಲು ಪ್ರಧಾನಿಗೆ ಮನವಿ

ರೈತರ ಬೇಡಿಕೆ ಈಡೇರಿಸಲು ಪ್ರಧಾನಿಗೆ ಮನವಿ

ರೈತರ ಬೇಡಿಕೆ ಈಡೇರಿಸಲು ಪ್ರಧಾನಿಗೆ ಮನವಿ

(ಸುದ್ದಿಕಿರಣ ವರದಿ)
ಉಡುಪಿ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಪ್ರಧಾನಿಗೆ ಮನವಿ ಸಲ್ಲಿಸಿದೆ.

ಕೃಷಿ ಉತ್ಪನ್ನಗಳಿಗೂ ಕೈಗಾರಿಕಾ ಉತ್ಪನ್ನಗಳಂತೆ ವೈಜ್ಞಾನಿಕ ರೀತಿಯಲ್ಲಿ ಉತ್ಪಾದನಾ ವೆಚ್ಚ ಹಾಗೂ ಲಾಭಾಂಶ ಸೇರಿಸಿ, ಲಾಭದಾಯಕ ಬೆಲೆ ನಿಗದಿಗೊಳಿಸಬೇಕು. ಲಾಭದಾಯಕ ಬೆಲೆಯನ್ನೇ ಬೆಂಬಲ ಬೆಲೆಯನ್ನಾಗಿ ಘೋಷಿಸಿ, ಕಟಾವಿಗೆ ಪೂರ್ವದಲ್ಲೇ ಖರೀದಿ ಕೇಂದ್ರ ತೆರೆದು ಖರೀದಿಗೆ ವ್ಯವಸ್ಥೆ ಮಾಡಬೇಕು. ಸರಕಾರ ಘೋಷಿಸಿದ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿ ಶಿಕ್ಷಾರ್ಹ ಅಪರಾಧ ಎಂದು ಕಾನೂನು ರಚಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನಿರಿಸಿಕೊಂಡು ಭಾರತೀಯ ಕಿಸಾನ್ ಸಂಘ ಕರೆ ನೀಡಿದ್ದ ರಾಷ್ಟವ್ಯಾಪಿ ಪ್ರತಿಭಟನೆಯಂತೆ ಉಡುಪಿಯಲ್ಲೂ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಅನುಪಸ್ಥಿತಿಯಲ್ಲಿ ಜಿಲ್ಲಾ ಯೋಜನಾಧಿಕಾರಿ ಮನವಿ ಸ್ವೀಕರಿಸಿದರು.

ಅಖಿಲ ಭಾರತೀಯ ಕಿಸಾನ್ ಸಂಘದ ತೀರ್ಮಾನದಂತೆ ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ, ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರಕಾರದ ರೈತಪರ ತಾತ್ಸಾರ ಧೋರಣೆಯ ವಿರುದ್ಧ ಎಚ್ಚರಿಕೆ ನೀಡುವ ಕ್ರಮ ಇದಾಗಿದ್ದು, ಉಡುಪಿಯಲ್ಲಿಯೂ ಧರಣಿ ನಡೆಸಲಾಗಿದೆ ಎಂದು ಎಂದು ಸಂಘದ ಜಿಲ್ಲಾಧ್ಯಕ್ಷ ನವೀನ್ ಚಂದ್ರ ಜೈನ್ ತಿಳಿಸಿದರು.

ಮನವಿಗೆ ಸರಕಾರ ಸ್ಪಂದಿಸದಿದ್ದಲ್ಲಿ ಲೋಕಸಭಾ ಸದಸ್ಯರ ಮೂಲಕ ಮುಂದಿನ ಹೋರಾಟ ಮಾಡುವ ಬಗ್ಗೆ ಕೇಂದ್ರ ಸಮಿತಿ ತೀರ್ಮಾನಿಸಿದೆ ಎಂದು ಎಚ್ಚರಿಸಿದರು.

ಆದರೆ, ನಮ್ಮ ಹೋರಾಟ ಶಾಂತ ಹಾಗೂ ನ್ಯಾಯಸಮ್ಮತವಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಮ್ಮ ಹೋರಾಟಗಳು ರಾಜಕೀಯ ಪ್ರೇರಿತವಾಗಿಲ್ಲ. ಕೇವಲ ರೈತರ ಹಿತದೃಷ್ಟಿಯಿಂದ ಮಾತ್ರ ಎಂದವರು ಸ್ಪಷ್ಟಪಡಿಸಿದರು.

ಮನವಿ ನೀಡಿದ ತಂಡದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಕಾರ್ಕಳ ತಾಲೂಕಿನ ಪ್ರಮುಖರಾದ ಉಮಾನಾಥ ರಾನಡೆ, ಸುಂದರ ಶೆಟ್ಟಿ, ಹರೀಶ್ ಕುಮಾರ್, ಚಂದ್ರಹಾಸ ಶೆಟ್ಟಿ, ಕುಂದಾಪುರ ತಾಲೂಕಿನ ಸೀತಾರಾಮ ಗಾಣಿಗ, ಶಂಕರನಾರಾಯಣ ಭಟ್, ಉಡುಪಿ ತಾಲೂಕಿನ ಆಸ್ತೀಕ ಶಾಸ್ತ್ರೀ, ವಿಶ್ವನಾಥ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!