Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ `ಹಡಿಲು ಭೂಮಿ ಬಿಟ್ಟು ಲಸಿಕಾ ಕೇಂದ್ರದತ್ತ ಬನ್ನಿ'

`ಹಡಿಲು ಭೂಮಿ ಬಿಟ್ಟು ಲಸಿಕಾ ಕೇಂದ್ರದತ್ತ ಬನ್ನಿ’

ಉಡುಪಿ: ಸ್ವಲ್ಪ ಕಾಲ ಹಡಿಲು ಭೂಮಿ ಯೋಜನೆಯನ್ನು ಮುಂದೂಡಿ ಕೋವಿಡ್ ಸಮಸ್ಯೆಯತ್ತ ಗಮನಹರಿಸುವಂತೆ ನಗರಸಭಾ ಸದಸ್ಯ ಹಾಗೂ ವಿರೋಧ ಪಕ್ಷ ನಾಯಕ ರಮೇಶ ಕಾಂಚನ್ ಸಲಹೆ ನೀಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, `ಸ್ಥಳೀಯ ಶಾಸಕರಾದ ರಘುಪತಿ ಭಟ್ ಅವರೇ, ಜನ ಕೊರೋನಾ ಎರಡನೇ ಅಲೆಯಿಂದ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದು, ನಿಮ್ಮ ಮೇಲೆ ಕ್ಷೇತ್ರದ ಜನರು ಬಹಳಷ್ಟು ನಂಬಿಕೆಯಿಟ್ಟು ಗೆಲ್ಲಿಸಿದ್ದಾರೆ. ಉಡುಪಿಯಲ್ಲಿ ಆಸ್ಪತ್ರೆಗಳು ಈಗಾಗಲೇ ಕೋವಿಡ್ ರೋಗಿಗಳಿಂದ ತುಂಬಿ ತುಳುಕಿದ್ದು, ತೀವ್ರ ಅಸ್ವಸ್ಥಗೊಂಡವರಿಗೆ ವೆಂಟಿಲೇಟರ್, ಐಸಿಯು ದೊರೆಯುತ್ತಿಲ್ಲ. ಜನರು ಇಂಥ ಸಂಕಷ್ಟ ಪರಿಸ್ಥಿತಿಯಲ್ಲಿ ಬಹಳಷ್ಟು ಭಯಭೀತರಾಗಿದ್ದು ಕೊರೊನಾ ಲಸಿಕೆ ಪಡೆಯಲು ಹಾತೊರೆಯುತಿದ್ದಾರೆ. ಆದರೆ, ಲಸಿಕಾ ಕೇಂದ್ರದಲ್ಲಿ ಸರಿಯಾಗಿ ಲಸಿಕೆ ದೊರೆಯುತ್ತಿಲ್ಲ!

45 ವರ್ಷ ಮೇಲ್ಪಟ್ಟವರು ಮೊದಲ ಡೋಸ್ ಪಡೆದಿದ್ದು ಅವರಿಗೆ ಎರಡನೇ ಡೋಸ್ ಪಡೆಯಲು ಸಾಧ್ಯವಾಗುತಿಲ್ಲ. ಅದರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರಾಗಿದ್ದು ಹಲವು ಬಾರಿ ಲಸಿಕಾ ಕೇಂದ್ರಕ್ಕೆ ಬಂದು ಕಾದು ಕಾದು ಸುಸ್ತಾಗಿ ಹಿಂತಿರುಗಿರುತ್ತಿದ್ದಾರೆ.

ಮೊದಲ ಡೋಸ್ ಕೋವಾಕ್ಸಿನ್ ಪಡೆದವರಿಗೆ ಇದೀಗ ಎರಡನೇ ಡೋಸ್ ಅದು ಸಿಗುತ್ತಿಲ್ಲ. ಈಗ ಕೇವಲ ಕೋವಿಶೀಲ್ಡ್ ಮಾತ್ರ ದೊರೆಯುತ್ತಿದೆ ಹಾಗೂ ಬಹಳಷ್ಟು ಮಂದಿಯ ವ್ಯಾಕ್ಸಿನ್ ಪಡೆಯುವ ಅವಧಿಯೂ ಮಗಿಯುತ್ತಿದೆ. ಲಸಿಕೆ ಪಡೆಯಲು ಸಂಪೂರ್ಣ ಆನ್ ಲೈನ್ ವ್ಯವಸ್ಥೆ ಇದ್ದು, ಅದರ ಬಗ್ಗೆ ಜನರು ಪರದಾಡುವಂತಾಗಿದೆ. 18ರಿಂದ 44 ವರ್ಷದವರಿಗೂ ವ್ಯಾಕ್ಸಿನೇಶನ್ ಆರಂಭವಾಗಿದ್ದು ಆನ್ ಲೈನ್ ಬುಕ್ಕಿಂಗ್ ನಲ್ಲೂ ಬಹಳಷ್ಟು ಗೊಂದಲ ಇದೆ. ವೆಬ್ ಸೈಟ್ ನಲ್ಲಿ ನೋಂದಣಿ ಆಗುವುದಕ್ಕಿಂತ ಮುಂಚೆನೇ ವ್ಯಾಕ್ಸಿನ್ ಬುಕ್ ಆಗಿರುತ್ತದೆ. ಸ್ಲಾಟ್ ಗಳು ಬುಕ್ ಎಂದು ತೋರಿಸುದ್ದು ಆರೋಗ್ಯ ಸೇತು ಆ್ಯಪ್ ನಲ್ಲಿ ಇದೆ ಎಂದು ತೋರಿಸುತ್ತಿದೆ.

ಲಸಿಕಾ ಕೇಂದ್ರದಲ್ಲಿ ಸಾಮಾನ್ಯ ಜನರು ಕ್ಯೂನಲ್ಲಿ ನಿಂತು ಟೋಕನ್ ತೆಗೆದುಕೊಂಡು ಕಾಯುತ್ತಿದ್ದರೂ ಪ್ರಭಾವಿ ವ್ಯಕ್ತಿಗಳು ಯಾವುದೇ ಟೋಕನ್ ಇಲ್ಲದೆ ರಾಜಕೀಯ ಪ್ರಭಾವ ಬಳಸಿ ವ್ಯಾಕ್ಸಿನ್ ಪಡೆಯುತ್ತಿದ್ದಾರೆ!

ಒಟ್ಟಾರೆಯಾಗಿ ವ್ಯಾಕ್ಸಿನೇಶನ್ ಸಿಸ್ಟಮ್ ಗೊಂದಲದ ಗೂಡಾಗಿದ್ದು, ಇಂಥ ಕ್ಲಿಷ್ಟಕರ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ನಿಮಗೆ ಬಹಳಷ್ಟು ಜವಾಬ್ದಾರಿ ಇದ್ದು ತಾವು ತಕ್ಷಣ ತಮ್ಮ ಜವಾಬ್ದಾರಿ ಅರಿತು ಹಡಿಲು ಭೂಮಿ ಯೋಜನೆಯನ್ನು ಸ್ವಲ್ಪ ಸಮಯ ಮುಂದೂಡಿ, ಲಸಿಕಾ ಕೇಂದ್ರದತ್ತ ದೌಡಾಯಿಸಿ. ಜನರ ಸಮಸ್ಯೆ ಪರಿಹರಿಸುವ ಬಗ್ಗೆ ಕಾರ್ಯಪ್ರವೃತ್ತರಾಗಿ ಎಂದು ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!