Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಕೋವಿಡ್ ನಿಯಂತ್ರಣ ಲಸಿಕೆಯಿಂದ ಮಾತ್ರ ಸಾಧ್ಯ

ಕೋವಿಡ್ ನಿಯಂತ್ರಣ ಲಸಿಕೆಯಿಂದ ಮಾತ್ರ ಸಾಧ್ಯ

ಉಡುಪಿ: ಕೋವಿಡ್ ನಿಯಂತ್ರಣ ಲಸಿಕೆ ಪಡೆಯುವುದರಿಂದ ಮಾತ್ರ ಸಾಧ್ಯವಾಗಲಿದ್ದು, ಸಾರ್ವಜನಿಕರು ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೇ ಸರ್ಕಾರದಿಂದ ನೀಡುವ ಉಚಿತ ಕೋವಿಡ್ ಲಸಿಕೆ ಪಡೆಯುವಂತೆ ಸಂಸದೆ ಶೋಭಾ ಕರಂದ್ಲಾಜೆ ಸಲಹೆ ನೀಡಿದರು.

ಸೋಮವಾರ ಇಲ್ಲಿನ ಹನುಮಂತನಗರ ಶಾಲೆಯಲ್ಲಿ ಆಯೋಜಿಸಿದ್ದ ಕೋವಿಡ್ 19 ಲಸಿಕಾ ಮಹಾಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ಕೋವಿಡ್ ಲಸಿಕೆ ಅಭಿಯಾವನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 3,37,095 ಮಂದಿ ಪ್ರಥಮ ಡೋಸ್ ಲಸಿಕೆ ಪಡೆದಿದ್ದು, ಶೇ. 25 ಸಾಧನೆ ಆಗಿದೆ. 95,477 ಮಂದಿ ಎರಡನೇ ಡೋಸ್ ಪಡೆದು 7 ಶೇ. ಸಾಧನೆ ಆಗಿದೆ. ಲಸಿಕೆ ಅಭಿಯಾನದ ಇಂದು 30 ಸಾವಿರ ಡೋಸ್ ಲಸಿಕೆ ನೀಡಲಿದ್ದು, ಜಿಲ್ಲೆಯಲ್ಲಿ ಒಟ್ಟು ಪ್ರಥಮ ಡೋಸ್ 3,67,000 ಮಂದಿಗೆ ನೀಡುವ ಮೂಲಕ ಶೇ. 30 ಸಾಧನೆ ಆಗಲಿದೆ. 3ನೇ ಅಲೆ ವೇಳೆಗೆ ಜಿಲ್ಲೆಯಲ್ಲಿ 70ರಿಂದ 80 ಶೇ. ವರೆಗೆ ಪ್ರಥಮ ಡೋಸ್ ನೀಡುವ ಗುರಿ ಹೊಂದಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್, ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ. ಲಸಿಕೆಯಿಂದ ಮಾತ್ರ ಪರಿಹಾರ ಸಾಧ್ಯ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಬೇಕು. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ 5.04 ಶೇ. ಇದೆ ಎಂದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಮಂಜು ಕೊಳ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ನಗರಸಭೆ ಸದಸ್ಯರು ಇದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಸ್ವಾಗತಿಸಿ, ಲಸಿಕೆ ಉಸ್ತುವಾರಿ ಡಾ. ಎಂ. ಜಿ. ರಾಮ ವಂದಿಸಿದರು.

ಸುಮಾರು 300ಕ್ಕೂ ಅಧಿಕ ಮಂದಿಗೆ ಈ ಕೇಂದ್ರದಲ್ಲಿ ಲಸಿಕೆ ನೀಡಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!