ನವದೆಹಲಿ: ಕೋವಿಡ್ ಲಸಿಕೆ ಪಡೆಯಲು ಯಾರೂ ಹಿಂಜರಿಯಕೂಡದು. ದಯವಿಟ್ಟು ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಭಾನುವಾರ ನಡೆದ ತಿಂಗಳ ರೇಡಿಯೊ ಕಾರ್ಯಕ್ರಮ ಮನ್ ಕೀ ಬಾತ್ ನಲ್ಲಿ ಮಾತನಾಡಿದ ಅವರು, ದೇಶದ ಲಸಿಕೆ ಅಭಿಯಾನವನ್ನು ಪ್ರಶಂಸಿಸಿದರು.
ನಾವು ದೇಶವಾಸಿಗಳು ಕೊರೊನಾ ವಿರುದ್ಧ ಹೋರಾಡುತ್ತಿದ್ದೇವೆ. ಈ ಹೋರಾಟದಲ್ಲಿ ನಾವು ಒಟ್ಟಾಗಿ ಅನೇಕ ಅಸಾಧಾರಣ ಮೈಲಿಗಲ್ಲನ್ನು ಸಾಧಿಸಿದ್ದೇವೆ. ಕೆಲವೇ ದಿನಗಳ ಹಿಂದೆ ನಮ್ಮ ದೇಶ ಅಭೂತಪೂರ್ವ ಸಾಧನೆ ಮಾಡಿದೆ.
ಲಸಿಕೆ ವಿಚಾರದಲ್ಲಿ ದಯವಿಟ್ಟು ಭಯ ತೊಡೆದುಹಾಕಿ. ಲಸಿಕೆ ಹಾಕಿಸಿದ ಬಳಿಕ ಕೆಲವೊಮ್ಮೆ ಜನರಿಗೆ ಜ್ವರ ಬರಬಹುದು. ಆದರೆ, ಅದು ತುಂಬಾ ಸೌಮ್ಯವಾಗಿರುತ್ತದೆ. ಕೆಲವೇ ಗಂಟೆಗಳ ವರೆಗೆ ಮಾತ್ರ ಇರುತ್ತದೆ. ಲಸಿಕೆಯಿಂದ ತಪ್ಪಿಸಿಕೊಳ್ಳುವುದು ತುಂಬಾ ಅಪಾಯಕಾರಿ. ನೀವು ನಿಮ್ಮನ್ನು ಅಪಾಯಕ್ಕೆ ತಳ್ಳುವುದು ಮಾತ್ರವಲ್ಲದೆ. ನಿಮ್ಮ ಕುಟುಂಬ ಮತ್ತು ಇಡೀ ಹಳ್ಳಿಯನ್ನೂ ಅಪಾಯಕ್ಕೆ ದೂಡಿದಂತಾಗುತ್ತದೆ ಎಂದು ಪ್ರಧಾನಿ ಮೋದಿ ಎಚ್ಚರಿಸಿದ್ದಾರೆ.
ವೈದ್ಯರ ಸೇವೆ ಪ್ರಶಂಸನೀಯ
ಕೋವಿಡ್ 19 ಸಾಂಕ್ರಾಮಿಕ ಸಂದರ್ಭದಲ್ಲಿ ವೈದ್ಯರ ಅವಿರತ ಸೇವೆಗೆ ಇಡೀ ರಾಷ್ಟ್ರ ಕೃತಜ್ಞವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜು. 1ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಈ ವರ್ಷದ ಆಚರಣೆಯನ್ನು ಮಹಾವೈದ್ಯ ಡಾ. ಬಿ. ಸಿ. ರಾಯ್ ಅವರಿಗೆ ಸಮರ್ಪಿಸಲಾಗುವುದು. ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಜನರ ಸೇವೆಗಾಗಿ ಶ್ರಮಿಸುತ್ತಿರುವ ವೈದ್ಯರ ಕೊಡುಗೆಗೆ ನಾವೆಲ್ಲ ಕೃತಜ್ಞರಾಗಿದ್ದೇವೆ. ಕೋವಿಡ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ವೈದ್ಯರ ದಿನ ಹೆಚ್ಚು ಮಹತ್ವವೆನಿಸಿದೆ ಎಂದು ಮೋದಿ ಹೇಳಿದರು.
ಕೊರೊನಾದಿಂದ ಇಹಲೋಕ ತೊರೆದ ಫ್ಲೈಯಿಂಗ್ ಸಿಖ್ ಖ್ಯಾತಿಯ ಅಥ್ಲೀಟ್ ಮಿಲ್ಕಾ ಸಿಂಗ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು