Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ಲಿಂಗಾಯತ ಸಮುದಾಯಗಳಿಗೆ ಮೀಸಲಾತಿ ನೀಡದಿದ್ದಲ್ಲಿ ಮತ್ತೆ ಸತ್ಯಾಗ್ರಹ

ಲಿಂಗಾಯತ ಸಮುದಾಯಗಳಿಗೆ ಮೀಸಲಾತಿ ನೀಡದಿದ್ದಲ್ಲಿ ಮತ್ತೆ ಸತ್ಯಾಗ್ರಹ

ಲಿಂಗಾಯತ ಸಮುದಾಯಗಳಿಗೆ ಮೀಸಲಾತಿ ನೀಡದಿದ್ದಲ್ಲಿ ಮತ್ತೆ ಸತ್ಯಾಗ್ರಹ

(ಸುದ್ದಿಕಿರಣ ವರದಿ)
ಉಡುಪಿ: ಲಿಂಗಾಯತ ಸಮುದಾಯದ ಎಲ್ಲಾ ಪಂಗಡಗಳಿಗೆ 2ಎ ಮೀಸಲಾತಿ ನೀಡುವ ಬಗ್ಗೆ ಸರಕಾರ ಸೆ. 15ರ ವರೆಗೆ ಕಾಲಾವಕಾಶ ಕೇಳಿದ್ದು, ಅ. 1ರೊಳಗೆ ಮೀಸಲಾತಿ ನೀಡದಿದ್ದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮತ್ತೆ ಸತ್ಯಾಗ್ರಹ ನಡೆಸಲಾಗುವುದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪ್ರತಿಜ್ಞಾ ಪಂಚಾಯತ್ ಅಭಿಯಾನ ಅಂಗವಾಗಿ ಉಡುಪಿಗೆ ಭೇಟಿ ನೀಡಿದ ಅವರು, ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಲಿಂಗಾಯತ ಸಮುದಾಯ 3 ಕೋಟಿ ಜನಸಂಖ್ಯೆ ಹೊಂದಿದ್ದು, ಸಾಮಾಜಿಕ ಸೌಲಭ್ಯದಿಂದ ವಂಚಿತವಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ಲಿಂಗಾಯತ ಸಮುದಾಯದಲ್ಲಿ 110 ಪಂಗಡಗಳಿದ್ದು, ಅದರಲ್ಲಿ ಕೆಲವೇ ಪಂಗಡಗಳಿಗೆ 2ಎ ಮೀಸಲಾತಿ ಸೌಲಭ್ಯ ನೀಡಲಾಗಿದೆ. 12 ಪಂಗಡಗಳು 3ಬಿ ಮೀಸಲಾತಿ ಪಡೆದಿವೆ. ಉಳಿದ ಪಂಗಡಗಳು ಅವಕಾಶ ವಂಚಿತವಾಗಿದ್ದು, ಎಲ್ಲರಿಗೂ 2ಎ ಮೀಸಲಾತಿ ಸೌಲಭ್ಯ ದೊರೆಯಬೇಕು. ಈ ಬಗ್ಗೆ ಸರಕಾರವನ್ನು ಆಗ್ರಹಿಸಲಾಗಿದ್ದು, ಈ ಕುರಿತು ವರದಿ ನೀಡುವಂತೆ ಹಿಂದುಳಿದ ವರ್ಗದ ಆಯೋಗಕ್ಕೆ ಸರಕಾರ ಪತ್ರ ಬರೆದಿದೆ.

ಈಚೆಗೆ ಕೇಂದ್ರ ಸರಕಾರ ಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯಗಳಿಗೆ ವಹಿಸಿರುವುದರಿಂದ ವರದಿಯನ್ನು ಶೀಘ್ರವಾಗಿ ತರಿಸಿಕೊಂಡು ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಒದಗಿಸಬೇಕು ಎಂದವರು ಆಗ್ರಹಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಯು. ಸಿ. ನಿರಂಜನ್, ಉಡುಪಿ ಬಸವ ಸಮಿತಿ ಅಧ್ಯಕ್ಷ ಸಿದ್ಧರಾಮಣ್ಣ, ಪದಾಧಿಕಾರಿಗಳಾದ ಗಂಗಾಧರ, ಸುರೇಶ್, ಮಲ್ಲಿಕಾರ್ಜುನಪ್ಪ, ಶಂಭುಲಿಂಗ ಶೆಟ್ಟರ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!