Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಮೆಗಾ ಲೋಕ ಅದಾಲತ್ ಜಾಗೃತಿ ಜಾಥಾ

ಮೆಗಾ ಲೋಕ ಅದಾಲತ್ ಜಾಗೃತಿ ಜಾಥಾ

ಮೆಗಾ ಲೋಕ ಅದಾಲತ್ ಜಾಗೃತಿ ಜಾಥಾ

(ಸುದ್ದಿಕಿರಣ ವರದಿ)

ಉಡುಪಿ: ಬೆಂಗಳೂರು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಉಡುಪಿ, ಕುಂದಾಪುರ ಮತ್ತು ಕಾರ್ಕಳ ನ್ಯಾಯಾಲಯಗಳಲ್ಲಿ ಈ ತಿಂಗಳ 14ರಂದು ಆಯೋಜಿಸಲಾಗಿರುವ ಮೆಗಾ ಲೋಕ ಅದಾಲತ್ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಶೋಕಮಾತಾ ಚರ್ಚ್ ಎದುರು ಜಾಗೃತಿ ಜಾಥಾ ನಡೆಯಿತು.

ಚರ್ಚ್ ಎದುರಿನಿಂದ ಆರಂಭಗೊಂಡ ಜಾಥಾ, ಕವಿ ಮುದ್ದಣ ಮಾರ್ಗ ಮೂಲಕ ಸಾಗಿ ಚಿತ್ತರಂಜನ್ ಸರ್ಕಲ್ ಬಳಿ ಸಮಾಪನಗೊಂಡಿತು.

ಸಾರ್ವಜನಿಕರಿಗೆ ಮಾಹಿತಿ ಕರಪತ್ರ ವಿತರಿಸಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ, ಸಿವಿಲ್ ನ್ಯಾಯಧೀಶೆ ಶರ್ಮಿಳಾ ಎಸ್., ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಶೀಘ್ರ ಪರಿಹಾರ ಹಾಗೂ ರಾಜೀ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾದ ಪ್ರಕರಣಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಗರ ಪೊಲೀಸ್ ಠಾಣಾಧಿಕಾರಿ ಪ್ರಮೋದ್ ಕುಮಾರ್, ಕಾನೂನು ಸೇವೆಗಳ ಪ್ರಾಧಿಕಾರದ ಲೋಕ ಅದಾಲತ್ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.

ಶೋಕಾಮಾತಾ ಚರ್ಚ್ ಧರ್ಮಗುರು ವಂ| ಚಾರ್ಲ್ಸ್ ಮಿನೇಜಸ್ ಶುಭ ಹಾರೈಸಿದರು.

ವಕೀಲೆ ಕೆ. ಅಮೃತಕಲಾ, ಫಾ| ವಿಲಿಯಂ ಮಾರ್ಟಿಸ್, ನಾಗರಿಕ ಸಮಿತಿ ಸಹ ಸಂಚಾಲಕ ತಾರಾನಾಥ ಮೇಸ್ತ ಶಿರೂರು, ಸದಸ್ಯ ರಾಜೇಶ್ ಕಾಪು ಮೊದಲಾದವರಿದ್ದರು.

ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ಪ್ರಸ್ತಾವನೆಗೈದರು. ಕೆ. ಬಾಲಗಂಗಾಧರ ರಾವ್ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!