Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಲೋಪವಿಲ್ಲದಂತೆ ನಿಧಿ ಸಂಗ್ರಹ ಕಾರ್ಯವಾಗಲಿ

ಲೋಪವಿಲ್ಲದಂತೆ ನಿಧಿ ಸಂಗ್ರಹ ಕಾರ್ಯವಾಗಲಿ

ಉಡುಪಿ: ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮೂಲಕ ಸುಮಾರು 1,400 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಭವ್ಯ ಶ್ರೀರಾಮ ಮಂದಿರ ಧನ ಸಂಗ್ರಹ ಕಾರ್ಯ ಯಾವುದೇ ಲೋಪವಿಲ್ಲದಂತೆ ನಡೆಸಬೇಕು ಎಂದು ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಲಹೆ ನೀಡಿದರು.
ಶನಿವಾರ ಇಲ್ಲಿನ ಮಧ್ವವಿಜಯ ಸಭಾಂಗಣದಲ್ಲಿ ನಡೆದ ಟ್ರಸ್ಟ್ ನ ಜಿಲ್ಲಾ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.
ನಿಧಿ ಸಂಗ್ರಹದ ಹೊಣೆ ಹೊತ್ತಿರುವ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಜ. 15 ಮಕರ ಸಂಕ್ರಮಣದಿಂದ ಆರಂಭಿಸಿ ಫೆ. 27 ಮಾಘ ಪೂರ್ಣಿಮೆ ವರೆಗೆ 45 ದಿನಗಳ ಕಾಲ ಮಾತ್ರ ನಿಧಿ ಸಂಗ್ರಹದಲ್ಲಿ ತೊಡಗುವರು. ಪ್ರತಿಯೊಬ್ಬ ಭಾರತೀಯನ ಕೊಡುಗೆಯೂ ಮಂದಿರ ನಿರ್ಮಾಣದಲ್ಲಿ ಸಲ್ಲಬೇಕೆಂಬ ಆಶಯದಿಂದ ಪ್ರತೀ ವ್ಯಕ್ತಿಗೆ ಕನಿಷ್ಠ 10 ರೂ. ಹಾಗೂ ಮನೆಯೊಂದರಿಂದ ಕನಿಷ್ಟ 100 ರೂ.ನಂತೆ ಹಣ ಸಂಗ್ರಹದ ಗುರಿ ಇರಿಸಿಕೊಳ್ಳಲಾಗಿದ್ದು, ಪ್ರತೀ ಮನೆ ಮನೆ ಭೇಟಿ ನೀಡಲಾಗುವುದು. ನಿಧಿ ಸಂಗ್ರಹಕ್ಕಾಗಿ 100 ರೂ.ಗಳಿಂದ ತೊಡಗಿ 1000 ರೂ. ಮುಖಬೆಲೆಯ ಕೂಪನ್ ಮುದ್ರಿಸಲಾಗಿದೆ. ವಿಶ್ವ ಹಿಂದೂ ಪರಿಷತ್ ನ ಅಧಿಕೃತ ಕಾರ್ಯಕರ್ತರ ಬಳಿ ಮಾತ್ರವೇ ದೇಣಿಗೆ ನೀಡಿ ಸೂಕ್ತ ರಶೀದಿ ಪಡೆಯಬೇಕು. ಇಲ್ಲವಾದಲ್ಲಿ ನೇರವಾಗಿ ಟ್ರಸ್ಟ್ ಖಾತೆ ಹಣ ಸಲ್ಲಿಸಬಹುದು ಎಂದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ವಿಹಿಂಪ ಪ್ರಾಂತ್ಯ ಕಾರ್ಯವಾಹ ಕೃಷ್ಣಮೂರ್ತಿ, ಸಂಘಚಾಲಕ ನಾರಾಯಣ ಶೆಣೈ ಇದ್ದರು.
ಕಾರ್ಯಕ್ರಮದಲ್ಲಿ ಶಾಸಕ ಲಾಲಾಜಿ ಮೆಂಡನ್, ವಿಹಿಂಪ ಕುಟುಂಬ ಪ್ರಬೋಧಿನಿ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಬಜರಂಗ ದಳದ ಶರಣ್ ಪಂಪ್ ವೆಲ್ ಮತ್ತು ಸುನಿಲ್ ಕೆ. ಆರ್., ಡಾ. ವಾದಿರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಮೊದಲಾದವರಿದ್ದರು.
ವಿಹಿಂಪ ಮಾತೃ ಬಳಗದ ಪೂರ್ಣಿಮಾ ಸುರೇಶ್ ನಿರೂಪಿಸಿದರು. ವಿಹಿಂಪ ಕಾರ್ಯದರ್ಶಿ ದಿನೇಶ ಮೆಂಡನ್ ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!