Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಹಳಕಟ್ಟಿಯವರಿಂದಾಗಿ ವಚನ ಸಾಹಿತ್ಯ ಲಭ್ಯ

ಹಳಕಟ್ಟಿಯವರಿಂದಾಗಿ ವಚನ ಸಾಹಿತ್ಯ ಲಭ್ಯ

ಸುದ್ದಿಕಿರಣ ವರದಿ
ಶನಿವಾರ, ಜುಲೈ 2

ಹಳಕಟ್ಟಿಯವರಿಂದಾಗಿ ವಚನ ಸಾಹಿತ್ಯ ಲಭ್ಯ
ಉಡುಪಿ: ನಶಿಸಿಹೋಗುತ್ತಿದ್ದ, ತಾಳೆಗರಿಯಲ್ಲಿದ್ದ ಮೂಲ ವಚನ ಸಾಹಿತ್ಯವನ್ನು ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಗೆ ತೆರಳಿ ಹುಡುಕಿ, ಸಂಗ್ರಹಿಸಿ ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಗ್ರಂಥ ರೂಪದಲ್ಲಿ ಎಲ್ಲರೂ ಓದಲು ಅನುಕೂಲವಾಗುವಂತೆ ಮುದ್ರಿಸಿದ ಫ. ಗು. ಹಳಕಟ್ಟಿಯವರ ಕಾರ್ಯದಿಂದಾಗಿ ಇಂದು ಅಮೂಲ್ಯ ವಚನ ಭಂಡಾರ ಎಲ್ಲರಿಗೂ ತಲುಪಲು ಸಾಧ್ಯವಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಹೇಳಿದರು.

ಶನಿವಾರ ಅಜ್ಜರಕಾಡು ಡಾ| ಜಿ. ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಡಾ| ಫ. ಗು. ಹಳಕಟ್ಟಿ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ವಚನ ಸಾಹಿತ್ಯದ ಪಿತಾಮಹ
ವಿಶ್ವ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಕನ್ನಡ ವಚನ ಸಾಹಿತ್ಯವನ್ನು ಸಂಗ್ರಹಿಸಿ ಸಂರಕ್ಷಿಸಿ, ಜನತೆಗೆ ಪರಿಚಯಿಸಿದ ಡಾ. ಫ. ಗು. ಹಳಕಟ್ಟಿಯವರ ತ್ಯಾಗ ಸಾಹಿತ್ಯ ಲೋಕಕ್ಕೆ ಅವಿಸ್ಮರಣೀಯ.

ವಚನಗಳಲ್ಲಿನ ಮಾನವೀಯ ಮೌಲ್ಯ ಹಾಗೂ ಸಂದೇಶಗಳು ವಿಶ್ವ ಶಾಂತಿ, ವಿಶ್ವ ಪ್ರೇಮ ಮೂಡಿಸಲಿವೆ. ವಚನ ಸಾಹಿತ್ಯದ ಮೂಲ ಪ್ರತಿಗಳ ಸಂಗ್ರಹಕ್ಕೆ ಮನೆ ಮನೆಗಳಿಗೆ ತೆರಳಿ ಬೇಡಿದ ಅವರ ತ್ಯಾಗ, ಅರ್ಪಣಾ ಮನೋಭಾವ ಮತ್ತು ಅವುಗಳ ಸಂರಕ್ಷಣೆ ಹಾಗೂ ಮುದ್ರಣಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಕನ್ನಡ ಸಾಹಿತ್ಯಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆಗಾಗಿ ಅವರನ್ನು ವಚನ ಸಾಹಿತ್ಯದ ಪಿತಾಮಹ ಎಂದು ಗುರುತಿಸಲಾಗುತ್ತಿದೆ.

ಯುವಜನತೆ ವಚನಗಳನ್ನು ಓದಿ, ಅವುಗಳಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಎಡಿಸಿ ವೀಣಾ ಹೇಳಿದರು.

ವಿಶ್ವಕ್ಕೆ ಪರಿಚಯ
ಡಾ| ಫ. ಗು. ಹಳಕಟ್ಟಿ ಕುರಿತು ಉಪನ್ಯಾಸ ನೀಡಿದ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗ ಸಹ ಪ್ರಾಧ್ಯಾಪಕ ಡಾ| ವೆಂಕಟೇಶ್, ವಚನ ಸಾಹಿತ್ಯ ಮತ್ತು ವಚನಕಾರರ ಬಗ್ಗೆ ಇಂದು ಆಮೂಲಾಗ್ರವಾಗಿ ತಿಳಿಯಲು ಹಳಕಟ್ಟಿಯವರ ಶ್ರಮದಿಂದ ಮಾತ್ರ ಸಾಧ್ಯವಾಗಿದೆ. ಮನೆಗಳಲ್ಲಿ ಧಾರ್ಮಿಕತೆ ಹೆಸರಿನಲ್ಲಿ ಪೂಜಿಸುತ್ತಿದ್ದ ವಚನ ಸಾಹಿತ್ಯದ ತಾಳೆಗರಿಗಳು, ಮನೆಯ ಅಟ್ಟದ ಮೇಲೆ ಧೂಳು ಹಿಡಿದ್ದಿದ್ದ, ಹುಳು ತಿಂದಿದ್ದ, ಅರ್ಧಂಬರ್ಧ ನಾಶವಾಗಿದ್ದ ವಚನಗಳ ಮೂಲ ಪ್ರತಿಗಳನ್ನು ಸಂಬಂಧಪಟ್ಟ ಮನೆಯವರ ಮನವೊಲಿಸಿ, ಬೇಡಿ, ಕೆಲವೊಮ್ಮೆ ಹಣ ನೀಡಿ ಅವುಗಳನ್ನು ಸಂಗ್ರಹಿಸಿ, ಅವುಗಳ ಅಧ್ಯಯನ ಮಾಡಿ, ಗ್ರಂಥ ರೂಪದಲ್ಲಿ ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಸಾಧನೆ ಮಾಡಿದ್ದು ಮಾತ್ರವಲ್ಲದೇ ಸುಮಾರು 250ಕ್ಕೂ ಹೆಚ್ಚು ಹೊಸ ವಚನಕಾರರು ಮತ್ತು ಅವರ ವಚನಗಳನ್ನು ಗುರುತಿಸಿದ್ದಾರೆ ಎಂದರು.

ತಾವು ಸಂಗ್ರಹಿಸಿದ ವಚನಗಳ ಮುದ್ರಣಕ್ಕಾಗಿ ಮುದ್ರಣಾಲಯ ಆರಂಭಿಸಲು, ಸ್ವಂತ ಮನೆಯನ್ನೇ ಮಾರಾಟ ಮಾಡಿ, ಜೀವನದ ಕೊನೆಯ ವರೆಗೂ ಬಡತನ, ಅನಾರೋಗ್ಯದಲ್ಲಿಯೇ ಅತ್ಯಂತ ಸರಳ ಜೀವನ ಜೀವಿಸಿದ ಹಳಕಟ್ಟಿಯವರು ವಚನ ಸಾಹಿತ್ಯ ಸಂಗ್ರಹಿಸಿ, ವಿಶ್ಲೇಷಿಸಿ, ವರ್ಗೀಕರಿಸದೇ ಇದ್ದಲ್ಲಿ ಅಜ್ಞಾತವಾಗಿ ಉಳಿದಿದ್ದ ಕನ್ನಡದ ಅಮೂಲ್ಯ ವಚನ ಗ್ರಂಥ ಭಂಡಾರ ಇಂದು ವಿಶ್ವಕ್ಕೆ ಪರಿಚಯವಾಗುತ್ತಿರಲಿಲ್ಲ.

ಅವರ ಸಾಧನೆಗೆ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಿದ್ದು, ಅವರ ಜನ್ಮದಿನವನ್ನು ಸರ್ಕಾರ ವಚನ ಸಾಹಿತ್ಯ ಸಂರಕ್ಷಣಾ ದಿನವನ್ನಾಗಿ ಆಚರಿಸುತ್ತಿದೆ ಎಂದರು.

ಡಾ| ಜಿ. ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗ ಮುಖ್ಯಸ್ಥೆ ಡಾ| ನಿಕೇತನ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾಲೇಜು ಪ್ರಾಂಶುಪಾಲ ಡಾ| ಭಾಸ್ಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಪ್ರಸಾದ್ ರಾವ್, ಡಾ| ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಲಾ ವಿಭಾಗದ ಡೀನ್ ಪ್ರೊ. ಸೋಜನ್ ಮೊದಲಾದವರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ರವಿರಾಜ್ ಶೆಟ್ಟಿ ವಂದಿಸಿದರು. ತ್ರಿವೇಣಿ ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!