Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ರಾಜ್ಯದಲ್ಲಿ ಮತ್ತೆ ವಾರಾಂತ್ಯ ಕರ್ಫ್ಯೂ ಜಾರಿ; ನೈಟ್‌ ಕರ್ಫ್ಯೂ ಮುಂದುವರಿಕೆ

ರಾಜ್ಯದಲ್ಲಿ ಮತ್ತೆ ವಾರಾಂತ್ಯ ಕರ್ಫ್ಯೂ ಜಾರಿ; ನೈಟ್‌ ಕರ್ಫ್ಯೂ ಮುಂದುವರಿಕೆ

ಸುದ್ದಿಕಿರಣ ವರದಿ
ಮಂಗಳವಾರ, ಜನವರಿ 4, 2022

ರಾಜ್ಯದಲ್ಲಿ ಮತ್ತೆ ವಾರಾಂತ್ಯ ಕರ್ಫ್ಯೂ ಜಾರಿ; ನೈಟ್‌ ಕರ್ಫ್ಯೂ ಮುಂದುವರಿಕೆ

ಬೆಂಗಳೂರು: ರಾಜ್ಯದ ಬಹುತೇಕ ಕಡೆಗಳಲ್ಲಿ ಮತ್ತೆ ಕೊರೊನಾ ಬಾಧೆ ಆರಂಭ ಹಾಗೂ ಓಮಿಕ್ರಾನ್ ನಿಯಂತ್ರಣ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಂಗಳವಾರ ಸಂಜೆ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಯಿತು.

ತಜ್ಞರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಮತ್ತು ಆರೋಗ್ಯ ಸಚಿವ ಡಾ. ಸುಧಾಕರ್ ಸುದ್ದಿಗೋಷ್ಟಿ ನಡೆಸಿ ಸಭೆಯ ನಿರ್ಣಯಗಳನ್ನು ವಿವರಿಸಿದರು.

ಪ್ರಸ್ತುತ ಬೆಂಗಳೂರಿನಲ್ಲಿ 3,048 ಸೋಂಕಿತರು ಹಾಗೂ 147 ಓಮಿಕ್ರಾನ್ ಪ್ರಕರಣ ಪತ್ತೆಯಾಗಿವೆ. ಕೊರೊನಾ ಪ್ರಕರಣಗಳ ಸಂಖ್ಯೆ ಕಳೆದ ಎರಡು ಮೂರು ದಿನಗಳಲ್ಲಿ ದುಪ್ಪಟ್ಟಾಗಿದೆ.

ಮಹಾರಾಷ್ಟ್ರದಲ್ಲಿ 10 ಸಾವಿರ ಕೇಸ್ ಪತ್ತೆಯಾಗಿದೆ. ಆದ್ದರಿಂದ ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ನಿಯಮ ಜಾರಿ ಮಾಡುವ ಅಗತ್ಯವಿದೆ‌ ಎಂದು ಸಭೆ ನಿರ್ಧರಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

ಬೆಂಗಳೂರಿನಲ್ಲಿ 10 ಮತ್ತು 12ನೇ ತರಗತಿ ಹೊರತುಪಡಿಸಿ ಉಳಿದೆಲ್ಲವೂ ಆಫ್​ಲೈನ್​ ತರಗತಿ ನಿಲ್ಲುತ್ತದೆ. ಶಾಲಾ ಕಾಲೇಜುಗಳು ಆನ್​ಲೈನ್ ವಿಧಾನದಲ್ಲಿ ನಡೆಯಲಿವೆ.

ಜ.6ರಿಂದಲೇ ಜಾರಿಯಾಗುವಂತೆ ವೀಕೆಂಡ್ ಕರ್ಫ್ಯೂ ಹಾಗೂ ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 5ರ ವರೆಗೆ ವೀಕೆಂಟ್ ಕರ್ಫ್ಯೂ ಇರುತ್ತದೆ.
ದಿನಸಿ ಸಾಮಗ್ರಿ , ಹೊಟೆಲ್​ಗಳಲ್ಲಿ ಪಾರ್ಸೆಲ್​, ಅತ್ಯಗತ್ಯ ಸೇವೆಗಳು ಮಾತ್ರ ಇರುತ್ತವೆ ಎಂದು ಡಾ. ಕೆ. ಸುಧಾಕರ್ ಮಾಹಿತಿ ನೀಡಿದರು.

ಸರ್ಕಾರಿ ಕಚೇರಿಗಳು, ಮಾಲ್​ಗಳಿಗೆ ಕೇಂದ್ರ ಸರಕಾರದ ಮಾರ್ಗಸೂಚಿ ಅನುಸರಿಸಲಾಗುವುದು.

ಚಿತ್ರಮಂದಿರ, ಮಾಲ್, ಬಾರ್, ಪಬ್​ಗಳ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಜನರಿಗೆ ಮಾತ್ರ ಪ್ರವೇಶ ಇರುತ್ತದೆ. ಇಲ್ಲಿಗೆ ಭೇಟಿ ನೀಡುವವರಿಗೆ ಲಸಿಕೆ ಕಡ್ಡಾಯ ಆಗಿರಲಿದೆ. ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ಡಬಲ್ ಡೋಸ್ ಕಡ್ಡಾಯ‌ ಮದುವೆ ಹೊರಾಂಗಣದಲ್ಲಿದ್ದರೆ 200, ಒಳಾಂಗಣದಲ್ಲಿದ್ದರೆ 100 ಮಂದಿಗೆ ಮಾತ್ರ ಅವಕಾಶ. ಅವರಿಗೂ 2 ಡೋಸ್ ಆಗಿರಬೇಕು. ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಆರ್​ಟಿಪಿಸಿಆರ್ ಕಡ್ಡಾಯ. ವಿದೇಶಿ ಪ್ರಯಾಣಿಕರ ಟ್ರ್ಯಾಕಿಂಗ್ – ಟ್ರೇಸಿಂಗ್ ಬಲಪಡಿಸಲು ತೀರ್ಮಾನಿಸಲಾಗಿದೆ. ಎಂದು ಅಶೋಕ್‌ ಮಾಹಿತಿ ನೀಡಿದರು.

ನಾವು ತೆಗೆದುಕೊಂಡ ತೀರ್ಮಾನಗಳನ್ನು ವೈಜ್ಞಾನಿವಾಗಿ ವಿಶ್ವ ಆರೋಗ್ಯ ಸಂಸ್ಥೆ, ಕೇಂದ್ರ ಸರ್ಕಾರ, ನೆರೆರಾಜ್ಯಗಳಾದ ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡುಗಳಲ್ಲಿ ತೆಗೆದುಕೊಂಡಿರುವ ತೀರ್ಮಾನಗಳನ್ನು ಪರಾಮರ್ಶಿಸಲಾಯಿತು. ಓಮಿಕ್ರಾನ್ ಸೋಂಕು ಕೋವಿಡ್​ಗಿಂತ 5 ಪಟ್ಟು ಜಾಸ್ತಿ ಆಗಲಿದೆ ಎಂದು ತಜ್ಞರು ವರದಿ ನೀಡಿದ್ದಾರೆ.

ರಾಜ್ಯದಲ್ಲಿ ಪಾಸಿಟಿವ್ ಪ್ರಕರಣ ಪ್ರಮಾಣ ಶೇ. 3ಕ್ಕಿಂತ ಹೆಚ್ಚಾಗುತ್ತಿದೆ. 20ರಿಂದ 50 ವರ್ಷದವರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಆರ್. ಅಶೋಕ್ ತಿಳಿಸಿದರು.

ಬೆಂಗಳೂರಿಗೆ ಒಂದು ಹಾಗೂ ರಾಜ್ಯದ ಇತರೆಡೆಗೆ ಮತ್ತೊಂದು ನಿಯಮಾವಳಿ ರೂಪಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಅಶೋಕ್ ತಿಳಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!