Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ವಿಮಾ ಪ್ರಬಂಧಕಿಗೆ ಅಭಿನಂದನೆ

ವಿಮಾ ಪ್ರಬಂಧಕಿಗೆ ಅಭಿನಂದನೆ

ಉಡುಪಿ: ಸುವರ್ಣ ತ್ರಿಭುಜ ಬೋಟ್ ದುರಂತ ಪ್ರಕರಣದಲ್ಲಿ 40 ಲಕ್ಷ ರೂ. ವಿಮಾ ಪರಿಹಾರ ಮೊತ್ತ ಮಂಜೂರು ಮಾಡುವಲ್ಲಿ ವಿಶೇಷ ಮುತುವರ್ಜಿ ವಹಿಸಿದ ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿಯ ಹಿರಿಯ ವಿಭಾಗೀಯ ಪ್ರಬಂಧಕಿ ಪ್ರತಿಭಾ ಶೆಟ್ಟಿ ಅವರನ್ನು ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಅಧ್ಯಕ್ಷ ಯಶಪಾಲ್ ಸುವರ್ಣ ಸನ್ಮಾನಿಸಿ, ಅಭಿನಂದಿಸಿದರು.

ಸುವರ್ಣ ತ್ರಿಭುಜ ಬೋಟ್ ವಿಮಾ ಪರಿಹಾರ ಮಂಜೂರಾತಿಯಿಂದ ಬ್ಯಾಂಕ್ ಒದಗಿಸಿದ್ದ ಬೋಟಿನ ಸಾಲ ಮರುಪಾವತಿಗೆ ಅನುಕೂಲವಾಯಿತು. ವಿಮಾ ಪರಿಹಾರ ಮಂಜೂರಾತಿಗೆ ಎದುರಾದ ತಾಂತ್ರಿಕ ಸಮಸ್ಯೆ ಪರಿಹರಿಸುವಲ್ಲಿ ಸಹಕರಿಸಿದ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ರಾಜನಾಥ ಸಿಂಗ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ. ರಘುಪತಿ ಭಟ್, ಮಲ್ಪೆ ಮೀನುಗಾರರ ಸಂಘ ಹಾಗೂ ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿ ಸಿಬಂದಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಯಶಪಾಲ್ ಸುವರ್ಣ ತಿಳಿಸಿದರು.

ಅಭಿನಂದನೆ ಸ್ವೀಕರಿಸಿದ ಪ್ರತಿಭಾ ಶೆಟ್ಟಿ, ವಿಮಾ ಪರಿಹಾರ ಮಂಜೂರಾತಿ ಪ್ರಕ್ರಿಯೆಯಲ್ಲಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಹಾಗೂ ಮೀನುಗಾರರ ಸಂಘದ ಪೂರಕ ಸಹಕಾರದಿಂದ ಈ ಗರಿಷ್ಠ ಮೊತ್ತ ಪರಿಹಾರ ನೀಡಲು ಸಾಧ್ಯವಾಯಿತು ಎಂದರು.

ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ, ಪ್ರಧಾನ ಕಾರ್ಯದರ್ಶಿ ಸುಭಾಸ್ ಮೆಂಡನ್, ಯಾಂತ್ರಿಕ ಟ್ರಾಲ್ ಬೋಟ್ ಸಹಕಾರಿ ಸಂಘ ಅಧ್ಯಕ್ಷ ರಾಮಚಂದ್ರ ಕುಂದರ್, ಆಳ ಸಮುದ್ರ ಮೀನುಗಾರರ ಸಂಘದ ಅಧ್ಯಕ್ಷ ಕಿಶೋರ್ ಸುವರ್ಣ, ಆಳ ಸಮುದ್ರ ಬೋಟ್ ತಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿ ಅಧಿಕಾರಿ ನರಸಿಂಹ ಪೈ, ವಿಮಾ ಪ್ರತಿನಿಧಿಗಳಾದ ವಸಂತ ಎನ್. ಕೋಟ್ಯಾನ್ ಮತ್ತು ವಿಜಯ ಪ್ರಕಾಶ್ ಹಾಗೂ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!