Saturday, July 2, 2022
Home ಸಮಾಚಾರ ರಾಜ್ಯ ವಾರ್ತೆ ವಿವಾದಕ್ಕೊಳಗಾದ ಕೃಷ್ಣಮಠ ನಾಮಫಲಕ

ವಿವಾದಕ್ಕೊಳಗಾದ ಕೃಷ್ಣಮಠ ನಾಮಫಲಕ

ಉಡುಪಿ: ದೇಸೀ ಸಂಸ್ಕೃತಿ ಹಾಗೂ ಉತ್ಪನ್ನಗಳ ಉತ್ಥಾನ ಮತ್ತು ಉತ್ತೇಜನಕ್ಕೆ ಪ್ರೋತ್ಸಾಹ ನೀಡುತ್ತಿರುವ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಅಪೇಕ್ಷೆಯಂತೆ ಇಲ್ಲಿನ ಶ್ರೀ ಕೃಷ್ಣಮಠದಲ್ಲಿ ಮಠದ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ತುಳು ನಾಮಫಲಕ ಅಳವಡಿಸಲಾಗಿದ್ದು, ಅದೀಗ ವಿವಾದಕ್ಕೆ ಎಡೆಮಾಡಿದೆ.
ಕೃಷ್ಣಮಠದಲ್ಲಿ ಕನ್ನಡ ನಾಮಫಲಕ ತೆಗೆದು ಹಾಕಿರುವುದು ಸರಿಯಾದ ಕ್ರಮವಲ್ಲ. ಅದನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಗ್ರವಾಗಿ ಖಂಡಿಸುತ್ತದೆ. ಜಿಲ್ಲಾ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡುವುದಾಗಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಗುಡುಗಿದ್ದಾರೆ.
ಕನ್ನಡ ಭಾಷೆಯನ್ನು ಅವಹೇಳನ ಮಾಡಿಲ್ಲ. ಕನ್ನಡ ನಾಮಫಲಕ ಅಳವಡಿಕೆ ಕ್ರಮ ಪ್ರಗತಿಯಲ್ಲಿದೆ ಎಂದು ಪರ್ಯಾಯ ಅದಮಾರು ಶ್ರೀಕೃಷ್ಣಮಠ ಸ್ಪಷ್ಟನೆಯನ್ನೂ ನೀಡಿದೆ.
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಈಚಿನ ದಿನಗಳಲ್ಲಿ ತುಳು ಲಿಪಿ ಕಲಿಕೆ ಕಾರ್ಯಾಗಾರ, ಗ್ರಾಮ ಪಂಚಾಯತ್, ಧಾರ್ಮಿಕ ಕೇಂದ್ರಗಳ ನಾಮಫಲಕಗಳಲ್ಲಿ ತುಳು ಲಿಪಿ ಬಳಸುವ ಪ್ರಯತ್ನ ನಡೆಯುತ್ತಿದೆ. ಅಂತೆಯೇ ಕೃಷ್ಣಮಠದಲ್ಲೂ ಸಂಸ್ಕೃತ ಹಾಗೂ ತುಳು ಲಿಪಿಯ ನಾಮಫಲಕ ಅಳವಡಿಸಲಾಗಿದೆ. ಹೊಸ ನಾಮಫಲಕದಲ್ಲಿ ತುಳು ಲಿಪಿ ಮತ್ತು ದೇವನಾಗರಿ ಲಿಪಿಯಲ್ಲಿ ಸಂಸ್ಕೃತದಲ್ಲಿ ಶ್ರೀಕೃಷ್ಣಮಠ ರಜತಪೀಠಪುರಂ ಎಂದು ಬರೆಯಲಾಗಿದೆ.
ಈ ಹಿಂದೆ ಕನ್ನಡ ಮತ್ತು ಆಂಗ್ಲಭಾಷೆಯ ನಾಮಫಲಕವಿದ್ದು, ಶ್ರೀಕೃಷ್ಣ ದೇವರ ಮಠ ಎಂದು ಬರೆಯಲಾಗಿತ್ತು. ಅದರಿಂದಾಗಿ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯ ಹಾಗೂ ಹೊರದೇಶಗಳಿಂದ ಆಗಮಿಸುವ ಭಕ್ತರಿಗೆ ಅನುಕೂಲವಾಗುತ್ತಿತ್ತು. ಈಚೆಗೆ ತುಳುನಾಡು ಕುಡ್ಲ ಸಂಘಟನೆ, ಕೃಷ್ಣಮಠಕ್ಕೆ ಭೇಟಿ ನೀಡಿ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರನ್ನು ಭೇಟಿಯಾಗಿ ಕೃಷ್ಣಮಠದ ನಾಮಫಲಕದಲ್ಲಿ ತುಳುಲಿಪಿಗೆ ಆದ್ಯತೆ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಾಮಫಲಕದಲ್ಲಿ ತುಳುವಿಗೆ ಸ್ಥಾನ ನೀಡಲಾಗಿದೆ.
ಕೃಷ್ಣಮಠಕ್ಕೆ ಕರ್ನಾಟಕದಾದ್ಯಂತದಿಂದ ಭಕ್ತರು ಭೇಟಿ ನೀಡುತ್ತಾರೆ. ಅಲ್ಲದೇ ದೇಶ- ವಿದೇಶದಿಂದಲೂ ಯಾತ್ರಿಕರು ಆಗಮಿಸುತ್ತಾರೆ. ಅವರಿಗೆ ತುಳು ಮತ್ತು ಸಂಸ್ಕೃತದಲ್ಲಿ ಬರೆದಿರುವ ನಾಮಫಲಕ ಓದುವುದು ಕಷ್ಟ ಸಾಧ್ಯ. ಆದ್ದರಿಂದ ಎಲ್ಲರಿಗೂ ಅರ್ಥವಾಗುವಂತೆ ಕನ್ನಡ ಮತ್ತು ಆಂಗ್ಲಭಾಷೆಯಲ್ಲಿಯೂ ಕೃಷ್ಣಮಠದ ಹೆಸರು ಹಾಕಬೇಕು ಎಂಬುದು ಭಕ್ತರು ಹಾಗೂ ಸ್ಥಳೀಯರ ಅಭಿಪ್ರಾಯ.

ಕಸಾಪ ಖಂಡನೆ
ಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡ ಅಕ್ಷರ ತೆಗೆದುಹಾಕಿರುವುದು ಸರಿಯಾದ ಕ್ರಮವಲ್ಲ. ಕನ್ನಡ ನಾಡಿನಲ್ಲಿ ಮೊದಲು ಕನ್ನಡಕ್ಕೆ ಆದ್ಯತೆ. ನಾಮಫಲಕದಲ್ಲಿ ಮೊದಲು ಕನ್ನಡ ಇರಬೇಕು. ಆನಂತರ ಇತರ ಭಾಷೆ ಇರಬೇಕು. ಧಾರ್ಮಿಕ ಸಂಸ್ಥೆಯೊಂದು ಭಾಷೆ- ಭಾಷೆಗಳ ನಡುವೆ ಕಂದಕ ಸೃಷ್ಟಿಸುವುದು ಸರಿಯಲ್ಲ. ನಾಮಫಲಕದ ಈ ಪ್ರಕರಣ ಸರಕಾರದ ಕಾನೂನಿನ ಸ್ವಷ್ಟ ಉಲ್ಲಂಘನೆಯಾಗಿದೆ. ಅದನ್ನು ಕೂಡಲೇ ಸರಿಪಡಿಸಬೇಕು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಮುಂದೆ ಇದನ್ನು ಸರಿಪಡಿಸುವ ವರೆಗೂ ಹೋರಾಟ ಅನಿವಾರ್ಯ ಎಂದು ನೀಲಾವರ ಸುರೇಂದ್ರ ಅಡಿಗ ಎಚ್ಚರಿಸಿದ್ದಾರೆ.

ಮಠದ ಸ್ಪಷ್ಟನೆ
ಕೃಷ್ಣ ಮಠದಲ್ಲಿ ಕನ್ನಡ ನಾಮಫಲಕ ಅಳವಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಪರ್ಯಾಯ ಅದಮಾರು ಮಠ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದ್ದಾರೆ. ಮಠದ ನವೀಕರಣ ಸಂದರ್ಭ ಪ್ಲಾಸ್ಟಿಕ್ ನಾಮಫಲಕಗಳನ್ನು ತೆರವು ಮಾಡಲಾಗಿತ್ತು. ಇದೀಗ ಮರದ ನಾಮಫಲಕ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಮೊದಲನೆದಾಗಿ ಕನ್ನಡ ಅಕ್ಷರದಲ್ಲಿ ನಾಮಫಲಕ ಇರಲಿದೆ. ಬಳಿಕ ಸಂಸ್ಕೃತ ಹಾಗೂ ತುಳು ಅಕ್ಷರದಲ್ಲಿ ಇರಲಿದೆ. ಮಠದಲ್ಲಿ ಲಕ್ಷದೀಪೋತ್ಸವವಿದ್ದ ಕಾರಣ ಕನ್ನಡ ನಾಮಫಲಕ ಅವಡಿಸಲು ಸ್ವಲ್ಪ ವಿಳಂಬವಾಗಿದೆ. ಈಗಾಗಲೇ ಸಂಸ್ಕೃತ ಹಾಗೂ ತುಳು ಲಿಪಿಯ ಬೋರ್ಡ್ ಅಳವಡಿಸಲಾಗಿದೆ. ಕನ್ನಡ ನಾಮಫಲಕ ಹಾಕುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಠದ ಗ್ರಂಥಗಳು ತುಳು ಮತ್ತು ಸಂಸ್ಕೃತ ಲಿಪಿಯಲ್ಲಿವೆ. ಹಾಗಾಗಿ ಕನ್ನಡದೊಂದಿಗೆ ಸಂಸ್ಕೃತ ಹಾಗೂ ತುಳುವಿಗೂ ಆದ್ಯತೆ ನೀಡಲಾಗಿದೆ ಎಂದು ಗೋವಿಂದರಾಜ್ ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!