Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ವಿವೇಕಾನಂದರ ಚಿಂತನೆ ಅಳವಡಿಸಿಕೊಳ್ಳಲು ಕರೆ

ವಿವೇಕಾನಂದರ ಚಿಂತನೆ ಅಳವಡಿಸಿಕೊಳ್ಳಲು ಕರೆ

ಉಡುಪಿ: ಸ್ವಾಮಿ ವಿವೇಕಾನಂದರು ಯುವಜನತೆಗೆ, ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ತತ್ವಶಾಸ್ತ್ರ, ಶಿಕ್ಷಣ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರ. ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ವಿಯಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.

ಮಂಗಳವಾರ ಎಂ.ಜಿ.ಎಂ. ಕಾಲೇಜು ನೂತನ ರವೀಂದ್ರ ಮಂಟಪದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಉಡುಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ, ಡಾ. ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದಿನ ಯುವ ಜನತೆ ನಮ್ಮ ಸಂಸ್ಕೃತಿಯನ್ನು ಮರೆಮಾಚುತ್ತಿರುವುದರ ಜೊತೆಗೆ ಪಾಶ್ಚಾತ್ಯ ಸಂಸ್ಕೃತಿಯ ಮೊರೆಹೋಗುತ್ತಿದ್ದಾರೆ. ಸಾಮಾಜಿಕ ಜಾಲತಾಣ ಸೃಜನಶೀಲ ವ್ಯಕ್ತಿತ್ವಕ್ಕೆ ತೊಡಕಾಗುತ್ತದೆ. ಋಣಾತ್ಮಕ ವ್ಯಕ್ತಿತ್ವ ಬೆಳೆಸುತ್ತದೆ. ಆದ್ದರಿಂದ ಯುವಕರು ಉತ್ತಮ ಗುರಿಯೊಂದಿಗೆ ಸಾಗಬೇಕು. ಕರ್ತವ್ಯದಲ್ಲಿ ಶ್ರೇಷ್ಠತೆ ಪಡೆಯುವುದೇ ಮೂಲ ಗುರಿಯಾಗಬೇಕು ಎಂದವರು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಸ್ವಾಮಿ ವಿವೇಕಾನಂದರ ಜಯಂತಿ ಇಂದಿನ ಯುವ ಜನರಿಗೆ ಪ್ರೇರಣೆ ಆಗಬೇಕು. ರಾಷ್ಟ್ರ ಪ್ರೇಮ, ದೇಶಭಕ್ತಿ ಮೂಡಿಸುವ ಮಾರ್ಗದರ್ಶನವಾಗಬೇಕು ಎಂದರು.

ತರಂಗ ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಅವರು ಡಾ. ದೇವಿದಾಸ್ ನಾಯ್ಕ ಕೂಜಳಿ ಅವರ ಮೌಲಿಕ ಶಿಕ್ಷಣದ ಕುರಿತ ಅಮೃತ ಬಿಂದು ಕೃತಿ ಅನಾವರಣಗೊಳಿಸಿ, ಯುವಕರು ಮೊದಲು ತಮ್ಮನ್ನು ತಾವು ಅರಿತುಕೊಳ್ಳಬೇಕು. ನರೇಂದ್ರ, ವಿವೇಕಾನಂದ ಆಗಿರುವ ಮೌಲ್ಯ ತಿಳಿದುಕೊಳ್ಳಬೇಕು. ಮಕ್ಕಳಿಗೆ ಕಲೆ, ಶಿಕ್ಷಣಕ್ಕೆ ಮುಕ್ತ ಅವಕಾಶವನ್ನು ಸರಕಾರ ಮತ್ತು ಪೋಷಕರು ಒದಗಿಸಬೇಕು ಎಂದರು.

ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಆಶಯ ನುಡಿ ವ್ಯಕ್ತಪಡಿಸುವ ಮೂಲಕ ಶುಭ ಹಾರೈಸಿದರು.

ಮೌಲಿಕ ಶಿಕ್ಷಣ ಶಿಬಿರದಲ್ಲಿ ಜೈನ್ ಹೈಸ್ಕೂಲ್ ಮುಖ್ಯ ಅಧ್ಯಾಪಕ ಮುನಿರಾಜ ರೆಂಜಾಳ, ಪ್ರವಚನಕಾರ ಜಿ. ಎಸ್. ನಟೇಶ್, ನಟ ಹಾಗೂ ಲೇಖಕ ಓಂಗಣೇಶ್ ಉಪನ್ಯಾಸ ನೀಡಿದರು.

ಉಡುಪಿ ಅಭಿವೃಧ್ದಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ, ಎಂ.ಜಿ.ಎಂ. ಕಾಲೇಜು ಪ್ರಾಂಶುಪಾಲ ಡಾ| ದೇವಿದಾಸ್, ಡಾ| ಜಿ ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ| ಭಾಸ್ಕರ ಶೆಟ್ಟಿ, ಉಡುಪಿ ಪದವಿ ಪೂರ್ವ ಕಾಲೇಜಿನ ಪ್ರೊ. ಮಾಲತಿದೇವಿ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!