Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಸ್ವಾತಂತ್ರ್ಯ ಸೇನಾನಿ ಗಾಂಧಿವಾದಿ ಶರ್ಮ ಬದುಕು ಆದರ್ಶಪ್ರಾಯ

ಸ್ವಾತಂತ್ರ್ಯ ಸೇನಾನಿ ಗಾಂಧಿವಾದಿ ಶರ್ಮ ಬದುಕು ಆದರ್ಶಪ್ರಾಯ

ಸುದ್ದಿಕಿರಣ ವರದಿ
ಸೋಮವಾರ, ಜುಲೈ 25

ಸ್ವಾತಂತ್ರ್ಯ ಸೇನಾನಿ ಗಾಂಧಿವಾದಿ ಶರ್ಮ ಬದುಕು ಆದರ್ಶಪ್ರಾಯ
ಶಿರ್ವ: ಕಟ್ಟಾ ಸಂಪ್ರದಾಯವಾದಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಮೂಲತಃ ಕಟಪಾಡಿ ಕೋಟೆ ಲಕ್ಷ್ಮೀನಾರಾಯಣ ಶರ್ಮ ಬಾಲ್ಯದಲ್ಲೇ ಶಿವಾಜಿ, ರಾಣಾಪ್ರತಾಪಸಿಂಹ, ಸ್ವಾಮೀ ವಿವೇಕಾನಂದ ಹಾಗೂ ಕ್ರಾಂತಿಕಾರಿಗಳ ಹೋರಾಟದ ಘಟನೆಗಳ ಮೂಲಕ ಪ್ರಭಾವಿತರಾಗಿದ್ದು, ಮಹಾತ್ಮಾ ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಜಾಗೃತಿಗಾಗಿ ಕರಾವಳಿ ಜಿಲ್ಲೆಗೆ ಆಗಮಿಸಿದಾಗ ಕಟಪಾಡಿಯಲ್ಲಿ ಕಂಡು ಅವರ ಮಾತುಗಳಿಂದ ಪ್ರಭಾವಿತರಾಗಿ ಗಾಂಧಿ ಅನುಯಾಯಿಯಾಗಿ ದೇಶದ ಸ್ವಾತಂತ್ರ್ಯ ಚಳುವಳಿಗೆ ಸಮರ್ಪಿಸಿಕೊಂಡ ತಾಮ್ರ ಪ್ರಶಸ್ತಿ ಪುರಸ್ಕೃತ ಬಂಟಕಲ್ಲು ಕೆ. ಎಲ್. ಶರ್ಮ ಬದುಕು ಆದರ್ಶಪ್ರಾಯ ಎಂದು ಶರ್ಮ ಅವರ ವಿದ್ಯಾರ್ಥಿ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ಕೆ. ಶ್ರೀನಿವಾಸ ರಾವ್ ಹೇಳಿದರು.

ಸ್ವಾತಂತ್ರ್ಯ ಸೇನಾನಿ ಬಂಟಕಲ್ಲು ದಿ. ಕೆ. ಎಲ್. ಶರ್ಮ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕ ವತಿಯಿಂದ ಅಮೃತ ಭಾರತಿಗೆ ಕನ್ನಡದ ಆರತಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಏರ್ಪಡಿಸಿದ ಸ್ವಾತಂತ್ರ್ಯ ಸೇನಾನಿಗಳ ಸ್ಮರಣೆಯ ಅಮೃತಾಂಜಲಿ ಕಾರ್ಯಕ್ರಮದಲ್ಲಿ ಶರ್ಮ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಮರ್ಪಿಸಿ ಮಾತನಾಡಿದರು.

ಶರ್ಮ ಅವರು ಬಳ್ಳಾರಿ, ಪುಣೆ, ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹೋರಾಟ ನಡೆಸಿ ವಿವಿಧ ಸೆರೆಮನೆಗಳಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗಿ ಅನುಭವಿಸಿದ ಸಂಕಷ್ಟದ ಘಟನೆಗಳನ್ನು ವಿವರಿಸಿದರು.

ಸ್ವಾತಂತ್ರ್ಯಾನಂತರ ವಿವಿಧ ಸಂಸ್ಥಾನಗಳ ಏಕೀಕರಣ ಚಳುವಳಿ, ಆಚಾರ್ಯ ವಿನೋಬಾ ಭಾವೆ ಅವರೊಂದಿಗೆ ಭೂದಾನ ಚಳುವಳಿಯಲ್ಲಿ ಭಾಗವಹಿಸಿದ ಬಗ್ಗೆ ಮಾಹಿತಿ ನೀಡಿದರು.

ಹೋರಾಟದ ಪ್ರಯುಕ್ತ ಬಂಟಕಲ್ಲಿನಲ್ಲಿ ಸರಕಾರ ನೀಡಿದ ಹತ್ತು ಎಕ್ರೆ ಜಾಗದಲ್ಲಿ ನೆಲೆಸಿ, ಪ್ರಗತಿಪರ ಕೃಷಿಕರಾಗಿ, ಶಿರ್ವ ಹಿಂದೂ ಪ್ರೌಢಶಾಲೆಯಲ್ಲಿ ಹಿಂದಿ ಭಾಷಾ ಶಿಕ್ಷಕರಾಗಿ ಮಾದರಿ ಜೀವನ ನಡೆಸಿದರು ಎಂದರು.

ಕಸಾಪ ಕಾಪು ತಾಲೂಕು ಘಟಕ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ. ಆರ್. ಪಾಟ್ಕರ್, ಬೆಳ್ಳೆ ಗ್ರಾ. ಪಂ. ಅಧ್ಯಕ್ಷ ಸುಧಾಕರ ಪೂಜಾರಿ, ಪ್ರದೀಪ್ ಬಸ್ರೂರು, ಶರ್ಮ ಪುತ್ರ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ ಇದ್ದರು.

ಕಸಾಪ ಸಮಿತಿ ಸದಸ್ಯೆ ಪ್ರಜ್ಞಾ ಮಾರ್ಪಳ್ಳಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸದಸ್ಯ ಎಸ್. ಎಸ್. ಪ್ರಸಾದ್ ನಿರೂಪಿಸಿದರು. ಸಮಿತಿ ಕೋಶಾಧ್ಯಕ್ಷ ವಿದ್ಯಾಧರ್ ಪುರಾಣಿಕ್ ವಂದಿಸಿದರು.

ವಿದ್ಯಾ ಅಮ್ಮಣ್ಣಾಯ ಮತ್ತು ನವ್ಯತಾ ನಾಡಗೀತೆ ಹಾಡಿದರು.

ಶರ್ಮ ಅವರ ಮಕ್ಕಳು, ಮೊಮ್ಮಕ್ಕಳು, ಅಹ್ವಾನಿತ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಸ್ತೆಗೆ ಶರ್ಮ ಹೆಸರು
ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶರ್ಮ ಅವರ ಮನೆಯ ಪಕ್ಕದಿಂದ ಹಾದು ಹೋಗುವ ಮತ್ತು ಅವರು ನಡೆದಾಡಿದ ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜು ಸಮೀಪದಿಂದ ಇನ್ನಂಜೆ ಸಂಪರ್ಕ ರಸ್ತೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾವಸರದಲ್ಲಿ ಪಂಚಾಯತ್ ವತಿಯಿಂದ ಶರ್ಮ ಹೆಸರನ್ನಿಡುವ ನಿರ್ಣಯ ಕೈಗೊಳ್ಳಲಾಗುವುದು ಎಂದು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಆರ್. ಪಾಟ್ಕರ್ ಘೋಷಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!