Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಶಾಸಕರ ನಿಧಿಯಿಂದ 6 ಸಾವಿರ ಆಕ್ಸಿಮೀಟರ್

ಶಾಸಕರ ನಿಧಿಯಿಂದ 6 ಸಾವಿರ ಆಕ್ಸಿಮೀಟರ್

ಉಡುಪಿ: ರಾಜ್ಯ ಬಿಜೆಪಿ ಸೂಚನೆ ಮೇರೆಗೆ ಜಿಲ್ಲಾ ಬಿಜೆಪಿ, ಸೇವಾ ಹೀ ಸಂಘಟನ್ ತತ್ವದಡಿ ಜಿಲ್ಲಾ ಕೇಂದ್ರ, ಉಡುಪಿ ನಗರ, ಉಡುಪಿ ಗ್ರಾಮಾಂತರ, ಕಾಪು, ಕಾರ್ಕಳ, ಕುಂದಾಪುರ ಮತ್ತು ಬೈಂದೂರು ಮಂಡಲ ವ್ಯಾಪ್ತಿಯಲ್ಲಿ ತೆರೆದಿರುವ ಕೋವಿಡ್-19 ಸಹಾಯವಾಣಿ ಕೇಂದ್ರ ಯಶಸ್ವಿಯಾಗಿ ಕಾರ್ಯನಿರ್ವಸುತ್ತಿದ್ದು, ಶಾಸಕರ ನಿಧಿಯಿಂದ ಜಿಲ್ಲೆಗೆ 6 ಸಾವಿರ ಆಕ್ಸಿಮೀಟರ್ ಖರೀದಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.

ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಸಹಾಯವಾಣಿ ಮೂಲಕ ಕೋವಿಡ್ ಲಸಿಕೆ ವಿತರಣೆ ಮಾಹಿತಿ, ಆಸ್ಪತ್ರೆ ಮತ್ತು ವೆಂಟಿಲೇಟರ್, ಅಂಬುಲೆನ್ಸ್ ಮತ್ತು ಬೆಡ್, ಐಸೋಲೇಶನ್ ಕೇಂದ್ರ, ಆಯುಷ್ಮಾನ್ ಭಾರತ್ ಯೋಜನೆ, ಆಹಾರ ಮತ್ತು ಔಷಧಿ ಪೂರೈಕೆ, ಕೋವಿಡ್ ನಿಬಂಧನೆ, ಅಂತ್ಯ ಸಂಸ್ಕಾರ ಇತ್ಯಾದಿ ಅಗತ್ಯ ಮಾಹಿತಿ ಮತ್ತು ಸೇವೆಯನ್ನು ಜಿಲ್ಲೆಯಾದ್ಯಂತ ಒದಗಿಸಲಾಗುತ್ತಿದೆ. ಕೊರೊನಾ ಮುಕ್ತ ಬೂತ್ ಅಭಿಯಾನಕ್ಕೆ ಪಕ್ಷದ ಎಲ್ಲಾ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಪಾಸಿಟಿವ್ ರೋಗಿಗಳ ಪಟ್ಟಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಪತ್ತೆ ಕಾರ್ಯ ಸುಲಭವಾಗಲು ಪಾಸಿಟಿವ್ ರೋಗಿಗಳ ಕೈಗೆ ಬ್ಯಾಂಡ್ ಹಾಕುವಂತೆ ತಿಳಿಸಲಾಗಿದೆ ಎಂದರು.

ಕಾಂಗ್ರೆಸ್ ನಿಂದ ಅಪಪ್ರಚಾರ
ಬಿಜೆಪಿ ದೇಶ, ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ಕೊರೊನಾದ ವಿರುದ್ಧ ಜನಪರ ಕೆಲಸ ಮಾಡುತ್ತಿದ್ದರೂ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಟೂಲ್ ಕಿಟ್ ಮೂಲಕ ಬಿಜೆಪಿ ಹಾಗೂ ಪ್ರಧಾನಿ ಮೋದಿ ಖ್ಯಾತಿ ಕಡಿಮೆ ಮಾಡುವ ಕೆಲಸ ನಡೆಯುತ್ತಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಕಾಂಗ್ರೆಸ್ ಅಪಪ್ರಚಾರ ಬಿಟ್ಟು ತಳಮಟ್ಟದಲ್ಲಿ ಜನರಿಗಾಗಿ ಸೇವೆ ನೀಡುವತ್ತ ಗಮನಹರಿಸಬೇಕು. ತಳಮಟ್ಟದಿಂದ ಕೆಲಸ ಮಾಡಿ ಗುರುತಿಸಿಕೊಳ್ಳಬೇಕು. ಮೊದಲ ಹಂತದ ಲಸಿಕೆ ಅಭಿಯಾನದಲ್ಲಿ 48 ಲಕ್ಷ ಡೋಸ್ ಲಸಿಕೆ ವ್ಯರ್ಥವಾಗಲು ಕಾಂಗ್ರೆಸ್ ಅಪಪ್ರಚಾರವೇ ಕಾರಣ. ಕಾಂಗ್ರೆಸ್ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಕುಯಿಲಾಡಿ ಆರೋಪಿಸಿದರು.

ಕೋವಿಡ್ ಸಂಕಷ್ಟಕ್ಕೆ ಸ್ಪಂದನೆ
ಕೊರೊನಾ 2ನೇ ಅಲೆ ಸಂಕಷ್ಟಕ್ಕೊಳಗಾಗಿರುವ ಕೃಷಿಕರು, ಕಟ್ಟಡ ಕಾರ್ಮಿಕರು, ಆಟೋ- ಟ್ಯಾಕ್ಸಿ ಚಾಲಕರು ಹಾಗೂ ಹಲವು ವೃತ್ತಿನಿರತ ಸಮುದಾಯಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ 1,250 ಕೋಟಿ ರೂ. ಆರ್ಥಿಕ ಪರಿಹಾರ ಘೋಷಿಸಿದೆ. ಜೊತೆಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಉಚಿತ ಆಹಾರ ಧಾನ್ಯ ವಿತರಣೆ, ಕಿಸಾನ್ ಸಮ್ಮಾನ್ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಕಂತಿನ ಮೊತ್ತ ಜಮಾ ಮಾಡಿದೆ. ಆ ಮೂಲಕ ಕೋವಿಡ್ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ ಎಂದರು.

ಬಸ್ ನೌಕರರಿಗೂ ಪ್ಯಾಕೇಜ್ ಗೆ ಆಗ್ರಹ
ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ 3 ಸಾವಿರ ಮಂದಿ ಬಸ್ಸು ಚಾಲಕರು, ನಿರ್ವಾಹಕರು ಹಾಗೂ 1,500 ಮಂದಿ ಕ್ಲೀನರ್ ಗಳು ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿದ್ದಾರೆ. ಅವರಿಗೂ ಪರಿಹಾರ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಎಂದರು.

ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಕಚೇರಿ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ ಸುದ್ದಿಗೋಷ್ಟಿಯಲ್ಲಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!