Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ಕಡಲ್ಕೊರೆತ ಪ್ರದೇಶಗಳಿಗೆ ಶಾಸಕ ಭಟ್ ಭೇಟಿ

ಕಡಲ್ಕೊರೆತ ಪ್ರದೇಶಗಳಿಗೆ ಶಾಸಕ ಭಟ್ ಭೇಟಿ

ಉಡುಪಿ: ತೌಕ್ತೆ ಚಂಡಮಾರುತದ ಪ್ರಭಾವದಿಂದ ಉಡುಪಿಯಾದ್ಯಂತ ಭಾರೀ ಗಾಳಿ ಮಳೆಯಾಗುತ್ತಿದ್ದು ಪಡುಕೆರೆ, ಕುತ್ಪಾಡಿ ಭಾಗದಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದೆ.

ಪ್ರಕ್ಷುಬ್ಧ ಕಡಲು ಅಪಾಯದ ಮಟ್ಟ ಮೀರುತ್ತಿದ್ದು, ಶಾಸಕ ರಘುಪತಿ ಭಟ್ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಪಾಯದಂಚಿನಲ್ಲಿರುವ ಕಡಲ ತೀರದ ನಿವಾಸಿಗಳಿಗೆ ಬೇರೆಡೆ ಸ್ಥಳಾಂತರಗೊಳ್ಳುವಂತೆ ವಿನಂತಿಸಿದರು.

ಜಿಲ್ಲಾಡಳಿತದೊಂದಿಗೆ ಮಾತನಾಡಿದ ಶಾಸಕ ಭಟ್, ಅಪಾಯದಂಚಿನಲ್ಲಿರುವ ಕಡಲ ತೀರದ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.

ಮಲ್ಪೆ ಭಾಗದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದ್ದು, ಅಲ್ಲಿಗೆ ಸ್ಥಳಾಂತರಗೊಳ್ಳುವಂತೆ ಶಾಸಕರು ವಿನಂತಿಸಿದರು. ಅವರಿಗೆ ಅಲ್ಲಿಂದ ತೆರಳಲು ಎರಡು ಕೆ.ಎಸ್.ಆರ್.ಟಿ.ಸಿ. ಬಸ್ ವ್ಯವಸ್ಥೆ ಮಾಡಲಾಯಿತು.

ರಾತ್ರಿ ವೇಳೆ ಸಮುದ್ರ ಮತ್ತಷ್ಟು ಪ್ರಕ್ಷುಬ್ಧ ಸ್ಥಿತಿಗೆ ಬಂದರೆ ಅಪಾಯದ ಸ್ಥಿತಿಯಲ್ಲಿರುವ ಜನರನ್ನು ಸಾಗಿಸಲು ರಾತ್ರಿ ಶಾಂತಿನಗರ ಪಡುಕೆರೆ ಹಾಗೂ ಕುತ್ಪಾಡಿ ಭಾಗದಲ್ಲಿ ತಲಾ ಒಂದು ಬಸ್ಸಿನ ವ್ಯವಸ್ಥೆ ಮಾಡಲಾಗಿದೆ.

ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ನಗರಸಭೆ ಆಯುಕ್ತ ಉದಯಕುಮಾರ್ ಶೆಟ್ಟಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧಿಕಾರಿಗಳು, ಕರಾವಳಿ ಕಾವಲು ಪಡೆ ಅಧಿಕಾರಿಗಳು, ಪೊಲೀಸ್ ಇಲಾಖೆ ಪರಿಸ್ಥಿತಿ ಗಮನಿಸುವಂತೆ ಶಾಸಕ ಭಟ್ ಸೂಚಿಸಿದರು.

ಅಲ್ಲದೆ, ಕುತ್ಪಾಡಿ ಭಾಗದಲ್ಲಿ ಕಡಲ್ಕೊರೆತಕ್ಕೆ ತಕ್ಷಣದಲ್ಲಿ ಮರಳಿನ ಚೀಲ ಹಾಗೂ ಕಲ್ಲುಗಳನ್ನು ಹಾಕುವಂತೆ ಸೂಚನೆ ನೀಡಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!