ಸುದ್ದಿಕಿರಣ ವರದಿ
ಶನಿವಾರ, ಜುಲೈ 16
ಶಿಕ್ಷಣದಿಂದ ಧನಾತ್ಮಕ ವ್ಯಕ್ತಿತ್ವ
ಉಡುಪಿ: ಧನಾತ್ಮಕ ವ್ಯಕ್ತಿತ್ವ ರೂಪುಗೊಳ್ಳಲು ಶಿಕ್ಷಣ ಪಡೆಯಬೇಕು. ಇಲ್ಲವಾದಲ್ಲಿ ನಾವು ಆಧುನಿಕ ಸಮಾಜದಲ್ಲಿ ಕೊನೆಯ ಸ್ತರದಲ್ಲಿ ಉಳಿಯಬೇಕಾಗುತ್ತದೆ ಎಂದು ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ, ಶಾಲಾಡಳಿತ ಸಮಿತಿ ಗೌರವ ಸದಸ್ಯ, ಉದ್ಯಮಿ ಅಬ್ದುಲ್ ಜಲೀಲ್ ಹೇಳಿದರು.
ಶಾಲೆಯ ಪ್ರಸಕ್ತ ಸಾಲಿನ ವಿದ್ಯಾರ್ಥಿ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
ಹೆತ್ತವರು ಆರ್ಥಿಕವಾಗಿ ದುರ್ಬಲರಾಗಿದ್ದರೂ ಮಕ್ಕಳ ಶಿಕ್ಷಣ ನಿರಾಕರಿಸದೇ ಅವರನ್ನು ಶಿಕ್ಷಣವಂತರನ್ನಾಗಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾರಣರಾಗಬೇಕು. ಶಿಕ್ಷಣ ಪಡೆಯಲು ಇಂದು ವಿಫುಲ ಅವಕಾಶಗಳಿವೆ. ಅದನ್ನು ಸದುಪಯೋಗಿಸಿಕೊಂಡು ಬದುಕಿನಲ್ಲಿ ಯಶಸ್ವಿಯಾಗಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾಡಳಿತ ಮಂಡಳಿ ಅಧ್ಯಕ್ಷ ಗಣಪತಿ ಕಾರಂತ, ವಿದ್ಯೆ ಯಾರೂ ಕದಿಯಲಾಗದ ಸಂಪತ್ತು. ಹಾಗಾಗಿ ಮಕ್ಕಳು ಕಲಿಕೆಯಲ್ಲಿ ಅಸಡ್ಡೆ ವಹಿಸದೇ ಬದುಕಿನಲ್ಲಿ ಯಶಸ್ವಿಯಾಬೇಕು ಎಂದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಡಾ. ತ್ರಿವೇಣಿ ವೇಣುಗೋಪಾಲ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ಕುಮಾರ್, ಶಾಲಾಡಳಿತ ಮಂಡಳಿ ಸದಸ್ಯ ಪ್ರತಾಪ್ ಕುಮಾರ್ ಇದ್ದರು.
ಶಾಲಾ ಸಂಚಾಲಕ ಸುರೇಶ್ ಶೆಣೈ ಸ್ವಾಗತಿಸಿದರು. ನಿಕಟಪೂರ್ವ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್ ಪ್ರಸ್ತಾವನೆಗೈದರು. ಶಿಕ್ಷಕಿ ಅನುರಾಧ ಪ್ರವೀಣ್ ಶೆಟ್ಟಿ ನಿರೂಪಿಸಿದರು.