ಉಡುಪಿ: ಸನಾತನ ಹಿಂದೂ ಧರ್ಮದ ಬಗ್ಗೆ ಎಲ್ಲೂ ರಾಜಿ ಮಾಡಿಕೊಳ್ಳದೆ ಅದರ ಉಳಿವಿಗಾಗಿ ಅವಿರತ ಹೋರಾಟ ನಡೆಸಿದ ಶಿವಾಜಿ ಮಹಾರಾಜ್ ಯುವ ಜನಾಂಗಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಉಡುಪಿ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘ ಅಧ್ಯಕ್ಷ, ವಕೀಲ ದಿನೇಶ್ ಸಿ. ನಾಯ್ಕ್ ಹೇಳಿದರು.
ಇಲ್ಲಿನ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ ಶಿವಾಜಿ ಜಯಂತಿ ಆಚರಣೆ ಉದ್ಘಾಟಿಸಿ ಮಾತನಾಡಿದರು.
ಶಿವಾಜಿ ಜಯಂತಿಯನ್ನು ಸರ್ಕಾರ ಮತ್ತು ಸಂಘಸಂಸ್ಥೆಗಳು ತಿಥಿಯನುಸಾರ ಆಚರಣೆ ಮಾಡಲು ಮುಂದಾಗಬೇಕು ಎಂದರು.
ಬೆಂಗಳೂರಿನ ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿಯ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ. ಎಸ್., ಸಹಕಾರಿ ಕ್ಷೇತ್ರದಲ್ಲೂ ಶಿವಾಜಿ ಜಯಂತಿ ಆಚರಿಸುವ ಮೂಲಕ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘ ಮಾದರಿಯಾಗಿದೆ ಎಂದರು.
ಮಣಿಪಾಲ ಸಾರಸ್ವತ ಸೌಹಾರ್ದ ಸಹಕಾರಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಭುವನೇಶ್ ಪ್ರಭು, ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಜಿ. ಸಾಲ್ಯಾನ್, ಮೀನು ಮಾರಾಟಗಾರರ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಸುವರ್ಣ ಕಟಪಾಡಿ, ಅನಂತಪದ್ಮನಾಭ ಸಹಕಾರಿ ಸಂಘದ ಶಾಖಾಪ್ರಬಂಧಕ ಕಿರಣ್ ಮುಳ್ಳಕಟ್ಟೆ, ಶಾಲಾ ಶಿಕ್ಷಕಿ ಸಾವಿತ್ರಿ ಕೆ., ಲತಾ ಹಾಗೂ ಸಿಬಂದಿ ಇದ್ದರು.
ಉಡುಪಿ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಸ್ವಾಗತಿಸಿ, ವಂದಿಸಿದರು.