ಸುದ್ದಿಕಿರಣ ವರದಿ
ಶುಕ್ರವಾರ, ಜೂನ್ 17
ರಾಹುಲ್ ಗಾಂಧಿ ತಪ್ಪು ಮಾಡಿಲ್ಲ ಎಂದರೆ ಪ್ರತಿಭಟನೆ ಏಕೆ?: ಕಾಂಗ್ರೆಸ್ ಗೆ ಪ್ರಶ್ನೆ
ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಪ್ಪು ಮಾಡಿಯೇ ಇಲ್ಲ ಎಂದರೆ ಕಾರ್ಯಕರ್ತರು ಏಕೆ ಪ್ರತಿಭಟನೆ ಮಾಡಬೇಕು?
ಇದು ಕಾಂಗ್ರೆಸ್ ಗೆ ಮಾಜಿ ಮುಖ್ಯವಾಗಿ ಜಗದೀಶ ಶೆಟ್ಟರ್ ಪ್ರಶ್ನೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರ ಈ ನಡೆ ತನ್ನ ತಪ್ಪು ಮುಚ್ಚಿಕೊಳ್ಳುವ ಮತ್ತು ಜನರ ದಾರಿ ತಪ್ಪಿಸುವುದಾಗಿದೆ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದರು.
ಕಾನೂನು ವ್ಯಾಪ್ತಿಯಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಕಾರ್ಯ ನಿರ್ವಹಿಸುತ್ತದೆ. ಅವರಿಗೆ ದೊರೆತ ಮಾಹಿತಿ ಆಧಾರದ ಮೇಲೆ ತನಿಖೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಇಡಿ ವಿಚಾರಣೆ ವೇಳೆ ಹಗರಣಕ್ಕೆ ಸಂಬಂಧಿಸಿದಂತೆ ಹಿಂದಿನ ಕಾಂಗ್ರೆಸ್ ನಾಯಕರು ಕಾರಣ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಎಲ್ಲೋ ಲೋಪ ಆಗಿದೆ ಎಂಬ ಸಂಶಯ ವ್ಯಕ್ತವಾಗುತ್ತಿದೆ. ತಪ್ಪು ಮುಚ್ಚಿಕೊಳ್ಳಲು ಕಾಂಗ್ರೆಸ್ ಪ್ರತಿಭಟನೆ ನಾಟಕ ಮಾಡುತ್ತಿದೆ ಎಂದು ಹರಿಹಾಯ್ದರು.
ಕಾಂಗ್ರೆಸ್ 40-50 ವರ್ಷ ಕಾಲ ದೇಶದಲ್ಲಿ ಆಡಳಿತ ನಡೆಸಿದೆ. ಆ ಅವಧಿಯಲ್ಲಿ ದೇಶವನ್ನು ಲೂಟಿ ಹೊಡೆದಿದ್ದಾರೆ. ಮನಮೋಹನ್ ಸಿಂಗ್ ಅವಧಿಯಲ್ಲಿ ಎಷ್ಟೊಂದು ಹಗರಣಗಳಾಗಿವೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಧೀಮಂತ ಪ್ರಧಾನಿ ನರೇಂದ್ರ ಮೋದಿ ಒಂದೂ ಕಪ್ಪು ಚುಕ್ಕೆ ಇಲ್ಲದೇ ಆಡಳಿತ ನಡೆಸುತ್ತಿದ್ದಾರೆ.
ಭ್ರಷ್ಟಾಚಾರ ಹಗರಣಗಳು ಇಲ್ಲದಿರುವುದರಿಂದ ಕಾಂಗ್ರೆಸ್ ಗೆ ಆರೋಪ ಮಾಡಲು ವಿಚಾರಗಳೇ ಸಿಗುತ್ತಿಲ್ಲ ಎಂದರು.