Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಶೈಕ್ಷಣಿಕ ಸಮಸ್ಯೆ ಪರಿಹರಿಸಲು ಆಗ್ರಹ

ಶೈಕ್ಷಣಿಕ ಸಮಸ್ಯೆ ಪರಿಹರಿಸಲು ಆಗ್ರಹ

ಉಡುಪಿ: ಕೋವಿಡ್ 2ನೇ ಅಲೆ ದೇಶಾದ್ಯಂತ ಬಹಳಷ್ಟು ಸಮಸ್ಯೆಯುಂಟುಮಾಡಿದೆ. ದೇಶದ ವಿವಿಧ ಸ್ತರದ ನಾಗರಿಕರು ವಿವಿಧ ರೀತಿಯ ಸಮಸ್ಯೆಗೀಡಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಬಹಳಷ್ಟು ಹೊಡೆತ ಬಿದ್ದಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸರಕಾರದ ಅವೈಜ್ಞಾನಿಕ ನೀತಿಯಿಂದಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲೂ ಈ ಸಮಸ್ಯೆ ಕಾಣಬಹುದಾಗಿದೆ. ಎಲ್ಲ ರೀತಿಯ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುವಂತೆ ಎಸ್.ಐ.ಓ. ಆಗ್ರಹಿಸಿದೆ.

ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಸ್.ಐ.ಓ. ಜಿಲ್ಲಾಧ್ಯಕ್ಷ ಅರ್ಬಾಝ್ ಅಹ್ಮದ್, ಸರಕಾರ ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿ ನಡುವಿನ ಸಮನ್ವಯದ ಕೊರತೆಯಿಂದಾಗಿ ಶಾಲಾ ಶಿಕ್ಷಕರು ಸೂಕ್ತ ಸಮಯಕ್ಕೆ ಸಂಬಳ ಸಿಗದೆ ಕಂಗಾಲಾಗಿದ್ದಾರೆ. ವಿದ್ಯಾರ್ಥಿಗಳು ಶೈಕ್ಷಣಿಕ ಪಠ್ಯ ಕ್ರಮದಿಂದಲೂ ವಂಚಿತರಾಗುತ್ತಿದ್ದಾರೆ. ಸರಕಾರ ಆನ್ ಲೈನ್ ಶಿಕ್ಷಣ ಆರಂಭಿಸಿದರೂ ಸೂಕ್ತ ವ್ಯವಸ್ಥೆಯಿಲ್ಲದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಮಕ್ಕಳು ಶೈಕ್ಷಣಿಕ ಚಟುವಟಿಕೆ ತೊರೆದು ಬಾಲ ಕಾರ್ಮಿಕತೆಯಂಥ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಮನೆಯಲ್ಲಿರುವ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೂ ತುತ್ತಾಗುತ್ತಿದ್ದಾರೆ. ಇಂಥ ಸಂದಿಗ್ದ ಪರಿಸ್ಥಿತಿಯಲ್ಲಿ ಸರಕಾರ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸುವಂತೆ ಅವರು ಆಗ್ರಹಿಸಿದರು.

ಖಾಸಗಿ ಶಾಲೆಗಳು ಶಿಕ್ಷಕರಿಗೆ ಸಂಬಳ ಕೊಡದಿರುವ ಈ ಸಂದರ್ಭದಲ್ಲಿ ಸರಕಾರ ಸೂಕ್ತ ಪರಿಹಾರ ನೀಡಬೇಕು. ಕೆಲವು ಖಾಸಗಿ ಶಾಲೆಗಳು ಕೋವಿಡ್ ನಂಥ ಪರಿಸ್ಥಿತಿಯಲ್ಲಿ ಶಿಕ್ಷಕರನ್ನು ಕೆಲಸದಿಂದ ವಜಾ ಗೊಳಿಸುವಂಥ ಅಮಾನವೀಯ ಕೆಲಸ ಮಾಡುತ್ತಿದ್ದು ಸರಕಾರ ಮಧ್ಯಪ್ರವೇಶಿಸಿ ಅದನ್ನು ಕೂಡಲೇ ನಿಲ್ಲಿಸಬೇಕು.

ಸರಕಾರ ಆನ್ ಲೈನ್ ಶಿಕ್ಷಣ ಆರಂಭಿಸುವ ಮುನ್ನ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣಕ್ಕೆ ಬೇಕಾಗಿರುವ ಮೊಬೈಲ್ ಮತ್ತು ನೆಟ್ ವರ್ಕ್ ವ್ಯವಸ್ಥೆ ಕಲ್ಪಿಸಬೇಕು. ಶಾಲಾ ಮಕ್ಕಳಿಗೆ ಒದಗಿಸುವ ಪಠ್ಯ ಪುಸ್ತಗಳನ್ನು ಸೂಕ್ತ ಸಮಯಕ್ಕೆ ಒದಗಿಸಬೇಕು.

ಕೋವಿಡ್ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು ಸರಕಾರ ಈ ಬಗ್ಗೆ ಸರ್ವೇ ನಡೆಸಿ ಒಂದು ಮಗು ಕೂಡಾ ಶಿಕ್ಷಣ ವಂಚಿತವಾಗದಂತೆ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಮುಂದಿಟ್ಟರು.

ಪತ್ರಿಕಾಗೋಷ್ಟಿಯಲ್ಲಿ ಕ್ಯಾಂಪಸ್ ಕಾರ್ಯದರ್ಶಿ ಡಾ. ಫಹೀಮ್ ಹೂಡೆ, ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿ ಅಫ್ವಾನ್ ಬಿ. ಹೂಡೆ, ಎಸ್.ಐ.ಓ. ಮಲ್ಪೆ ಘಟಕ ಸ್ಥಾನೀಯ ಅಧ್ಯಕ್ಷ ಅಯಾನ್ ಮಲ್ಪೆ, ಎಸ್.ಐ.ಓ. ಹೂಡೆ ಘಟಕ ಸ್ಥಾನೀಯ ಅಧ್ಯಕ್ಷ ವಸೀಮ್ ಗುಜ್ಜರಬೆಟ್ಟು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!