Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಸಂಕುಚಿತ ಮನೋಭಾವದಿಂದ ಕಾಂಗ್ರೆಸ್ ಹೊರಬರಲಿ

ಸಂಕುಚಿತ ಮನೋಭಾವದಿಂದ ಕಾಂಗ್ರೆಸ್ ಹೊರಬರಲಿ

ಉಡುಪಿ: ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮಂಜೂರಾಗಿರುವ ಆಹಾರ ಧಾನ್ಯಗಳ ಕಿಟ್ ಗಳ ದುರುಪಯೋಗವಾಗಿದೆ ಎಂಬ ಆರೋಪ ಕಾಂಗ್ರೆಸ್ ಪ್ರಾಯೋಜಿತ, ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಅಂಚನ್ ಅವರ ರಾಜಕೀಯ ಗಿಮಿಕ್ ಆಗಿದ್ದು, ಚುನಾವಣೆ ಸಮೀಪಿಸುತ್ತಿದ್ದಂತೆ ವಿರೋಧಿಗಳು ಬಿಟ್ಟಿ ಪ್ರಚಾರಕ್ಕಾಗಿ ಇಂಥ ಆಧಾರ ರಹಿತ ಆರೋಪ ಮಾಡುವುದು ಸಹಜ. ಕಾಂಗ್ರೆಸ್ ಸಂಕುಚಿತ ಮನೋಭಾವದಿಂದ ಹೊರಬರಲಿ ಎಂದು ಜಿಲ್ಲಾ ಬಿಜೆಪಿ ಹೇಳಿದೆ.

ಜಿಲ್ಲಾ ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಹೇಳಿಕೆ ನೀಡಿ, ಅಲೆವೂರು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಶ್ರೀಕಾಂತ ನಾಯಕ್ ವಿರುದ್ಧ ಹಾಲಿ ಗ್ರಾ. ಪಂ. ಅಧ್ಯಕ್ಷೆ ಪುಷ್ಪಾ ಅಂಚನ್ ಪೂರ್ವಾಪರ ತಿಳಿಯದೆ ಮಣಿಪಾಲ ಆರಕ್ಷಕ ಠಾಣೆಯಲ್ಲಿ ನೀಡಿರುವ ದೂರಿನ ಬಗ್ಗೆ ಜಿಲ್ಲಾ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಂತೆ ಅಲೆವೂರು ಗ್ರಾ.ಪಂ.ಗೂ ಕಾರ್ಮಿಕ ಇಲಾಖೆಯಿಂದ ಕಿಟ್ ಮಂಜೂರಾಗಿದ್ದು, 113 ಕಿಟ್ ಗಳನ್ನು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ನೇತೃತ್ವದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಮ್ಮುಖದಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ. ಈ ಬಗ್ಗೆ ಸೂಕ್ತ ದಾಖಲೆಗಳಿವೆ ಎಂದು ಈಗಾಗಲೇ ಶ್ರೀಕಾಂತ ನಾಯಕ್ ಸ್ಪಷ್ಟನೆ ನೀಡಿದ್ದಾರೆ.

ರಾಷ್ಟ್ರ ಮತ್ತು ರಾಜ್ಯದೆಲ್ಲೆಡೆ ಸುಳ್ಳನ್ನೇ ಪ್ರತಿಪಾದಿಸುತ್ತಾ ಬಂದಿರುವ ಕಾಂಗ್ರೆಸ್, ಇದೀಗ ಗ್ರಾಮ ಪಂಚಾಯತ್ ಮಟ್ಟದಲ್ಲೂ ಇಂಥದೇ ಚಾಳಿ ಮುಂದುವರಿಸಿರುವುದು ಶೋಚನೀಯ ಎಂದು ಗುರುಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!