ಸಂಸ್ಕೃತ ವಿ.ವಿ. ಕುಲಪತಿ ದೇವನಾಥನ್ ಭೇಟಿ
(ಸುದ್ದಿಕಿರಣ ವರದಿ)
ಉಡುಪಿ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಕೆ. ಇ. ದೇವನಾಥನ್ ಇಲ್ಲಿನ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದರು.
ಕುಲಪತಿಗಳಾದ ಬಳಿಕ ಮೊದಲ ಭೇಟಿ ನೀಡುತ್ತಿರುವ ದೇವನಾಥನ್ ಅವರನ್ನು ಪರ್ಯಾಯ ಅದಮಾರು ಶ್ರೀಕೃಷ್ಣಮಠ ವತಿಯಿಂದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಾತನಾಡಿ, ಉಡುಪಿಯ ಎಲ್ಲ ಅಷ್ಟಮಠಾಧೀಶರೊಂದಿಗೆ ನೆಚ್ಚಿನ ಸಂಬಂಧವುಳ್ಳ ದೇವನಾಥನ್ ಅವರಿಂದ ಸಂಸ್ಕೃತ ವಿ.ವಿ. ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಹಾರೈಸಿದರು.
ಸಾನ್ನಿಧ್ಯ ವಹಿಸಿದ್ದ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಭಗವಂತನ ಪಾದ ನಖದಿಂದ ಹರಿದು ಬಂದ ಗಂಗೆಯಂತೆ ದೇವಭಾಷೆ ಸಂಸ್ಕೃತವೂ ಪರಿಶುದ್ಧ ಭಾಷೆ. ಸಂಸ್ಕೃತದ ಪ್ರಕಾಂಡ ಪಂಡಿತರಾದ ದೇವನಾಥನ್ ವಿನಯಶೀಲವಂತ ವ್ಯಕ್ತಿ ಎಂದು ಬಣ್ಣಿಸಿದರು.
ಉಡುಪಿ ಶ್ರೀಮನ್ವಧ್ವಸಿದ್ಧಾಂತಪ್ರಬೋಧಿನೀ ಸಂಸ್ಕೃತ ಮಹಾಪಾಠಶಾಲೆ ಪ್ರಾಂಶುಪಾಲ ಹರಿದಾಸ ಭಟ್ಟ ಸ್ವಾಗತಿಸಿ, ಗೌರವ ಪ್ರಾಧ್ಯಾಪಕ ಅಜಿತ ಆಚಾರ್ಯ ವಂದಿಸಿದರು. ಪ್ರಾಧ್ಯಾಪಕ ಷಣ್ಮುಖ ಹೆಬ್ಬಾರ್ ನಿರೂಪಿಸಿದರು.
ಪಲಿಮಾರು ಮಠಕ್ಕೆ ಭೇಟಿ
ಬಳಿಕ ಪ್ರೊ. ಕೆ. ಇ. ದೇವನಾಥನ್ ಅವರು ಪಲಿಮಾರು ಮಠಕ್ಕೆ ಭೇಟಿ ನೀಡಿದರು.
ಪಲಿಮಾರು ಮಠ ಆಶ್ರಯದ ತತ್ವ ಸಂಶೋಧನಾ ಸಂಸತ್ ಗೆ ಭೇಟಿ ನೀಡಿದರು.
ಪಲಿಮಾರು ಮಠದ ಹಿರಿಯ ಯತಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರನ್ನು ಭೇಟಿಯಾಗಿ ಫಲಮಂತ್ರಾಕ್ಷತೆ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಪ್ರಹ್ಲಾದ್ ಇದ್ದರು