Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಕೊರೊನಾ ಸಮಯದಲ್ಲೂ ಸಮರ್ಥ ಪರ್ಯಾಯ ನಿರ್ವಹಣೆ

ಕೊರೊನಾ ಸಮಯದಲ್ಲೂ ಸಮರ್ಥ ಪರ್ಯಾಯ ನಿರ್ವಹಣೆ

ಕೊರೊನಾ ಸಮಯದಲ್ಲೂ ಸಮರ್ಥ ಪರ್ಯಾಯ ನಿರ್ವಹಣೆ

ಉಡುಪಿ, ಡಿ. 26 (ಸುದ್ದಿಕಿರಣ ವರದಿ): ಕೊರೊನಾದ ಸಂಕಷ್ಟ ದಿನಗಳಲ್ಲೂ ಎರಡು ವರ್ಷಗಳವಧಿಯ ಪರ್ಯಾಯವನ್ನು ಸಮರ್ಥವಾಗಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನಿರ್ವಹಿಸಿದ್ದಾರೆ ಎಂದು ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಶ್ಲಾಘಿಸಿದರು.

ಇಲ್ಲಿನ ಶ್ರೀಕೃಷ್ಣ ಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ನಡೆದ ಅದಮಾರು ನರಹರಿತೀರ್ಥ ಸಂಸ್ಥಾನದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಪ್ರಿಯ ಶಿಷ್ಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಪ್ರಥಮ ಪರ್ಯಾಯಾವಧಿಯ ದೀಕ್ಷಾ ಸಮಾಪನ ವಿಶ್ವಾರ್ಪಣಮ್ ಉತ್ಸವದ ಸಮಾರೋಪ ಸಮಾರಂಬದಲ್ಲಿ ಭಾನುವಾರ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಿಜಾರ್ಥದ ಈಶಪ್ರಿಯ
ಸಂಸ್ಕೃತಿ ಪ್ರಿಯರಾದ ಶ್ರೀಪಾದರು ನಾಡಿನ ವಿವಿಧ ಸಾಂಸ್ಕೃತಿಕ ರಾಯಭಾರಿಗಳನ್ನು ಕರೆಸಿ, ಅವರಿಂದ ಸದ್ಬೋಧ ಮಾಡಿಸುವ ಮೂಲಕ ಜನಸಾಮಾನ್ಯರಿಗೆ ಸಂಸ್ಕೃತಿ ಪ್ರಿಯತೆಯನ್ನು ಮೆರೆದರು. ಪ್ರಧಾನಿ ಮೋದಿ ಕಲ್ಪನೆಯ ಆತ್ಮನಿರ್ಭರ ಕಾರ್ಯಕ್ರಮವನ್ನು ಶ್ರೀಮಠದಲ್ಲಿ ಸಾಕಾರಗೊಳಿಸುವ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿದರು. ಆಧ್ಯಾತ್ಮ ಪ್ರಿಯರಾಗಿ ಕೃಷ್ಣನ ಪೂಜೆಯೊಂದಿಗೆ ಸಮಾಜದ ಬಡವರ ಕಣ್ಣೋರೊರೆಸುವ ಕಾರ್ಯದಲ್ಲಿ ನಿರತರಾದರು. ಪರಿಸರ ಪ್ರಿಯತೆಯ ಕಾರ್ಯ ನಡೆಸಿದರು. ಸಾವಯವ ಕೃಷಿ, ರಾಸಾಯನಿಕ ಮುಕ್ತ ಬಣ್ಣಗಳ ಬಳಕೆ ಈ ಎಲ್ಲ ಕಾರ್ಯಗಳ ಮೂಲಕ ನಿಜಾರ್ಥದಲ್ಲಿ ಈಶಪ್ರಿಯರಾದರು ಎಂದರು.

ಭಾವುಕರಾದ ಶ್ರೀಪಾದರು
ತಮ್ಮ ಗುರುಗಳ ಶ್ಲಾಘನೆಯ ಮಾತುಗಳನ್ನು ಕೇಳಿದ ಪರ್ಯಾಯ ಅದಮಾರು ಶ್ರೀ ಈಶಪದರಿಯತೀರ್ಥ ಶ್ರೀಪಾದರು ಭಾವುಕರಾಗಿ ಗದ್ಗತಿತರಾದರು. ಅಶ್ರುಧಾರೆ ಸುರಿಸಿದರು.

ಈ ಸಂದರ್ಭದಲ್ಲಿ ಹಿರಿಯ ಶ್ರೀಪಾದರು ಸಮಾಧಾನಪಡಿಸಿದರು.

ಜ್ಞಾನದಿಂದ ಮಾತ್ರ ಮೋಕ್ಷ
ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಜ್ಞಾನದಿಂದ ಮಾತ್ರ ಮೋಕ್ಷ. ನಮ್ಮ ದೈನಂದಿನ ಕರ್ಮಗಳಿಂದ ಭಗವಂತನ ಅರಿವು ವೃದ್ಧಿಯಾಗಬೇಕು ಎಂಬುದು ಕೃಷ್ಣನ ವಚನ. ಜೊತೆಗೆ ಜ್ಞಾನಿಗಳಿಂದ ವಿದ್ಯೆ ಸಂಪಾದನೆ ಮಾಡುವ ಹಂಬಲ ಹೊಂದಿರಬೇಕು. ಅದರಿಂದ ಭಗವಂತನ ಸಾಕ್ಷಾತ್ಕಾರ ಸಾಧ್ಯ ಎಂದರು.

ಗುರು ಮತ್ತು ದೇವರ ಅನುಗ್ರಹದಿಂದ ಮಾತ್ರ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತವೆ ಎಂಬ ಭಾವ ಸದಾ ನಮ್ಮಲ್ಲಿ ಜಾಗೃತವಾಗಿರಬೇಕು. ಪ್ರಪಂಚದಲ್ಲಿ ಸೃಷ್ಟಿಯಾಗಿರುವ ಯಾವುದೇ ವಸ್ತು ವ್ಯರ್ಥವಲ್ಲ. ಎಲ್ಲಾ ವಸ್ತುಗಳಿಂದಲೂ ಸಮಾಜಕ್ಕೆ ನಿರ್ದಿಷ್ಟ ಕೊಡುಗೆ ಇರುತ್ತದೆ ಎಂದರು.

ಭಕ್ತಿಗೆ ಒಲಿವ ಕೃಷ್ಣ
ಸಾನ್ನಿಧ್ಯ ವಹಿಸಿದ್ದ ಪಲಿಮಾರು ಮಠದ ಹಿರಿಯ ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಭಕ್ತಿಗೆ ಮಾತ್ರ ಕೃಷ್ಣ ಒಲಿಯುತ್ತಾನೆ. ಅದರ ಹೊರತಾಗಿ ಅನ್ಯಮಾರ್ಗವಿಲ್ಲ.

ಪರ್ಯಾಯ ದೀಕ್ಷಾ ಸಮಾಪನವೆಂದರೆ ಎಲ್ಲವನ್ನೂ ಕೃಷ್ಣನ ಪಾದಕ್ಕೆ ಅರ್ಪಿಸಿ ಹೊರಡುವ ಕಾಲ. ವಿಶ್ವಾರ್ಪಣ ನಮ್ಮ ಬದುಕಿನಲ್ಲಿ ದಿನನಿತ್ಯ ನಡೆಯಬೇಕು. ದೈನಂದಿನ ಎಲ್ಲಾ ಕರ್ಮಗಳನ್ನು ದೇವರಿಗೆ ಸಮರ್ಪಿಸಬೇಕು. ಅದರಿಂದ ಜೀವನದಲ್ಲಿ ಶ್ರೇಯಸ್ಸು ಪ್ರಾಪ್ತಿಯಾಗುತ್ತದೆ ಎಂದರು.

ಶ್ಲಾಘನೆಗೆ ಪಾತ್ರನಾದ ಶಿಷ್ಯ
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಯಾವ ಪಕ್ಷದಲ್ಲಿ ಕೃಷ್ಣ ಮತ್ತು ಧನುರ್ಧಾರಿ ಅರ್ಜುನ ಇರುತ್ತಾರೋ ಅಲ್ಲಿ ಜಯ ಪ್ರಾಪ್ತಿಯಾಗುತ್ತದೆ.

ದೇವರ ಅನುಗ್ರಹ ಹಾಗೂ ಪ್ರಯತ್ನ ಇವೆರಡರ ಸಂಕೇತ ಕೃಷ್ಣ ಮತ್ತು ಅರ್ಜುನ.

ಗುರುಗಳಿಂದ ಶ್ಲಾಘಿಸಿಕೊಳ್ಳುವ ಶಿಷ್ಯ, ಲೋಕದಲ್ಲಿ ಪ್ರಖ್ಯಾತರಾಗುತ್ತಾರೆ. ಅದಕ್ಕೆ ಈಶಪ್ರಿಯತೀರ್ಥ ಶ್ರೀಪಾದರು ಉದಾಹರಣೆ ಎಂದರು.

ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಮಠಾಧೀಶ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಮತ್ತು ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಸನ್ಮಾನ
ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್, ನಿವೃತ್ತ ಅಧಿಕಾರಿ ಮತ್ತು ಲೋಕ ಶಿಕ್ಷಣ ಟ್ರಸ್ಟ್ ವಿಶ್ವಸ್ಥ ಟಿ. ಶ್ಯಾಮ ಭಟ್, ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ| ಟಿ. ಎಸ್. ರಮೇಶ ಭಟ್, ಮಠದ ಕಲಾಸಂಘಟಕ ಪ್ರಾದೇಶ ಆಚಾರ್ಯ, ಯಕ್ಷಗಾನ ಕಲಾವಿದ ವಾಸುದೇವ ರಂಗಾ ಭಟ್ಟ, ವಿದ್ವಾಂಸ ಹೆರ್ಗ ವಿದ್ವಾನ್ ರವೀಂದ್ರ ಭಟ್, ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮತ್ತು ಮಠದ ಕಲಾ ಸಲಹೆಗಾರ ಪುರುಷೋತ್ತಮ ಅಡ್ವೆ ಅವರನ್ನು ಸನ್ಮಾನಿಸಲಾಯಿತು.

ಅಭ್ಯಾಗತರಾಗಿ ಕೆನರಾ ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬ್ರಿಜ್ ಮೋಹನ ಶರ್ಮ, ಚೆನ್ನೈನ ಸಿ.ಆರ್. ಬಾಲಕೃಷ್ಣ ಭಟ್ ಭಾಗವಹಿಸಿದ್ದರು.

ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು. ವಿದ್ವಾಂಸ ಕೃಷ್ಣರಾಜ ಭಟ್ ಕುತ್ಪಾಡಿ ನಿರೂಪಿಸಿದರು.’

ಜೋಡಾಟ
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಾಸುದೇವ ರಂಗಾ ಭಟ್ಟರ ಸಂಯೋಜನೆಯಲ್ಲಿ ನಾಡಿನ ತೆಂಕು ಮತ್ತು ಬಡಗು ತಿಟ್ಟಿನ ಕಲಾವಿದರಿಂದ ಭಕ್ತಿ ಪಾರಮ್ಯ ಕೂಡಾಟ ನಡೆಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!