Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ಮೀನುಗಾರರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿ

ಮೀನುಗಾರರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿ

ಉಡುಪಿ: ಮೀನುಗಾರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಂಬರುವ ಅಗಸ್ಟ್ ನಿಂದ ಮೀನುಗಾರಿಕೆ ಋತು ಪ್ರಾರಂಭಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ವಿಳಂಬ ಮಾಡದೆ ಮೀನುಗಾರಿಕೆಗೆ ಅನುವು ಮಾಡಿಕೊಡಲು ಡೀಸೆಲ್ ಪಾಸ್ ಪುಸ್ತಕದ ನವೀಕರಣ ಮಾಡಿಕೊಡಬೇಕು.

ಕೊರೊನಾ ಸಂಕಷ್ಟ ಕಾಲದಲ್ಲಿಯೂ ಸರ್ಕಾರ ಅಧಿಕಾರ ಉಳಿಸಿಕೊಳ್ಳುವತ್ತ ಚಿಂತಿಸುತ್ತಿದೆಯೇ ಹೊರತು ಜನರ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ.

ಬೋಟುಗಳಿಗೆ ಒಂದು ಟ್ರಿಪ್ ಗೆ 4 ಸಾವಿರದಿಂದ 5 ಸಾವಿರ ಲೀ. ವರೆಗೆ ಡೀಸೆಲ್ ವಿನಿಯೋಗವಾಗುತ್ತದೆ. ಈಗಾಗಲೇ ಸರ್ಕಾರ ಡೀಸೆಲ್ ಗೆ ಅತ್ಯಧಿಕ ಕರ ಹೇರಿ ಮೀನುಗಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ಬಾರಿ 70 ರೂ. ಇದ್ದ ಬೆಲೆ ಪ್ರಸ್ತುತ 98 ರೂ.ಗೆ ನೆಗೆದಿದೆ. ಸರ್ಕಾರದಿಂದ ಬರುವ ಸಬ್ಸಿಡಿ ಸೌಲಭ್ಯ ಪಡೆಯಲು ಪಾಸ್ ಬುಕ್ ಕಡ್ಡಾಯವಾಗಿರುವುದರಿಂದ ಅದು ನವೀಕರಣಗೊಳಿಸದೆ ಸಬ್ಸಿಡಿ ಡೀಸೆಲ್ ಪಡೆಯಲು ಅಸಾಧ್ಯವಾಗಿದೆ.

ಹಾಗೆಯೇ ಸರ್ಕಾರ, ದ್ವಿಮುಖ ಸಂಹವನ ಸಾಧನ ಅಳವಡಿಸಲು ಆದೇಶಿಸಿದ್ದು, ಮೀನುಗಾರರು ಅದರ ಅಳವಡಿಕೆಗಾಗಿ ಸಮಯಾವಕಾಶದ ಬೇಡಿಕೆ ಸಲ್ಲಿಸಿದ್ದಾರೆ. ಈ ಯಂತ್ರೋಪಕರಣ ಅಳವಡಿಕೆ ಮಾಡಿದಲ್ಲಿ ಅದರ ಸರ್ವಿಸ್ ಸೆಂಟರ್ ಸೌಲಭ್ಯ ಬಗ್ಗೆ ಸರ್ಕಾರ ಗಮನಹರಿಸಬೇಕಾಗಿದೆ ಮತ್ತು ಸರ್ಕಾರ ಲ್ಯಾಂಡಿಂಗ್ ಬರ್ತಿಂಗ್ ಶುಲ್ಕವನ್ನು 3,500ರಿಂದ 12 ಸಾವಿರದ ವರೆಗೆ ಏರಿಸಿರುವುದು ಅವೈಜ್ಞಾನಿಕ. ಕರಾವಳಿ ಪ್ರದೇಶದ ಸಾವಿರಾರು ಕುಟುಂಬಗಳು ಮೀನುಗಾರಿಕೆಯನ್ನೇ ಅವಲಂಬಿಸಿ ಜೀವನ ನಡೆಸುವುದರಿಂದ ಸರ್ಕಾರ ಶೀಘ್ರವಾಗಿ ಮೀನುಗಾರರ ಈ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ ಎಂದು ಅಶೋಕ್ ಒತ್ತಾಯಿಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಮೀನುಗಾರರು ಈಗಾಗಲೇ ತೀವ್ರ ಸಂಕಷ್ಟದಲ್ಲಿದ್ದು ಅವರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ಇಲ್ಲವಾದಲ್ಲಿ ಕರಾವಳಿಯ ಸಮಸ್ತ ಮೀನುಗಾರರ ಪರವಾಗಿ ಕಾಂಗ್ರೆಸ್ ಪಕ್ಷದಿಂದ ಹೋರಾಟ ಅನಿವಾರ್ಯ ಎಂದವರು ಎಚ್ಚರಿಕೆ ನೀಡಿದ್ದಾರೆ.

ಅಶೋಕ್ ಅಭಿಮತಕ್ಕೆ ಜಿಲ್ಲಾ ಮೀನುಗಾರ ಕಾಂಗ್ರೆಸ್ ಸಂಘಟನೆ ಅಧ್ಯಕ್ಷ ಅಖಿಲೇಶ್ ಕೋಟ್ಯಾನ್ ಸಹಮತ ವ್ಯಕ್ತಪಡಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!