Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಸಮಾಜ ಮತ್ತು ಮಠಗಳದು ಅವಿನಾಭಾವ ಸಂಬಂಧ

ಸಮಾಜ ಮತ್ತು ಮಠಗಳದು ಅವಿನಾಭಾವ ಸಂಬಂಧ

ಸಮಾಜ ಮತ್ತು ಮಠಗಳದು ಅವಿನಾಭಾವ ಸಂಬಂಧ

ಉಡುಪಿ: ಆಧುನಿಕ ದಿನಗಳಲ್ಲೂ ಮಠಗಳ ಅಗತ್ಯತೆ ಏನು ಎಂದು ಕೇಳುವವರಿದ್ದಾರೆ. ಆದರೆ, ಸಮಾಜದಲ್ಲಿ ಮಠಗಳು ಬೇಕು. ಮಠ ಮತ್ತು ಸಮಾಜಗಳಿಗೆ ಅವಿನಾಭಾವ ಸಂಬಂಧವಿದೆ ಎಂದು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.

ಇಲ್ಲಿನ ಶ್ರೀಕೃಷ್ಣ ಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ಮಂಗಳವಾರ ನಡೆದ ಅದಮಾರು ನರಹರಿತೀರ್ಥ ಸಂಸ್ಥಾನದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಪ್ರಿಯ ಶಿಷ್ಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಪ್ರಥಮ ಪರ್ಯಾಯಾವಧಿಯ ದೀಕ್ಷಾ ಸಮಾಪನ ವಿಶ್ವಾರ್ಪಣಮ್ ಉತ್ಸವದ 17ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೌಶಲ್ಯಾಧಾರಿತ ಶಿಕ್ಷಣ
ಸೇವೆಯ ಮೂಲಕ ಮಠಗಳು ಸಮಾಜಕ್ಕೆ ಕೊಡುಗೆ ನೀಡಬೇಕು. ಸಮಾಜವೂ ಮಠಗಳ ಸಂರಕ್ಷಣೆ ಮಾಡುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕು ಎಂದು ಶ್ರೀಗಳು ಪ್ರತಿಪಾದಿಸಿದರು.

ಭಾರತೀಯ ಸಂಸ್ಕೃತಿ ಗುರುವಿಗೆ ಉನ್ನತ ಸ್ಥಾನ ಕಲ್ಪಿಸಿದೆ. ವಿದ್ಯೆಗೆ ಪ್ರಾಮುಖ್ಯತೆ ನೀಡಿದೆ. ಕೌಶಲ್ಯಾಧಾರಿತ ಶಿಕ್ಷಣ ಇಂದಿನ ಅಗತ್ಯ ಎಂದರು.

ಮೌಲಿಕ ಶಿಕ್ಷಣದಿಂದಲೇ ದೇಶದ ಬೆಳವಣಿಗೆ ಸಾಧ್ಯ ಎಂದ ಶ್ರೀಗಳು, ಶಾಲೆ ಮತ್ತು ಮನೆ ಎರಡೂ ವಾತಾವರಣಗಳಲ್ಲಿಯೂ ಮಕ್ಕಳ ಕಲಿಕೆಯ ಮುಖ್ಯ ಕಾರಣಗಳು.

ಅದಮಾರು ಮಠದ ಶೈಕ್ಷಣಿಕ ವ್ಯವಸ್ಥೆ ಈ ದಿಸೆಯಲ್ಲಿ ಶ್ರೀ ವಿಬುಧೇಶತೀರ್ಥರ ಆಶೀರ್ವಾದದೊಂದಿಗೆ ಮುಂದುವರಿಯುತ್ತಿದೆ ಎಂದರು.

ಜ್ಞಾನಾಧಾರಿತ ಶಿಕ್ಷಣ
ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ನಾವು ಕಲಿತ ವಿದ್ಯೆ ನಮ್ಮ ಅಭಿವೃದ್ಧಿಗೆ ಪೂರಕವಾಗಬೇಕು ಎಂದರು.

ಭಾರತೀಯ ಶಿಕ್ಷಣ ಪದ್ಧತಿ ಜ್ಞಾನಾಧಾರಿತವಾಗಿತ್ತು. ವ್ಯಕ್ತಿಗತ ಆಸಕ್ತಿಗೆ ಅನುಸಾರವಾಗಿತ್ತು. ಅಂಥ ಶಿಕ್ಷಣ ರೂಢಿಗೆ ಬರಬೇಕು ಎಂದು ಆಶಿಸಿದರು.

ಉಪನ್ಯಾಸ
ವಿಶ್ವವಾಣಿ ಪತ್ರಿಕೆ ಅಂಕಣಕಾರ ಟಿ. ದೇವಿದಾಸ್ ಸ್ವಾತಂತ್ರ್ಯೋತ್ತರ ಶಿಕ್ಷಣ ಪದ್ಧತಿ ಕುರಿತು ಮಾತನಾಡಿದರು.

ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ರೂವಾರಿ ಶ್ರೀ ವಿಬುಧೇಶತೀರ್ಥ ಶ್ರೀಪಾದರ ದೂರದರ್ಶಿತ್ವವನ್ನು ಸ್ಮರಿಸಿ ವಿಶೇಷ ಉಪನ್ಯಾಸ ನೀಡಿದರು.

ಸನ್ಮಾನ
ಈ ಸಂದರ್ಭದಲ್ಲಿ ಹಿರಿಯ ವಿದ್ವಾಂಸ ಎಂ. ನಾರಾಯಣಾಚಾರ್ಯ ಹಾಗೂ ಪೌರ ಕಾರ್ಮಿಕರಾದ ತಾರಾಮಿ ಬಾಯಿ ಮತ್ತು ಲಕ್ಷ್ಮಣ ಅವರನ್ನು ಶ್ರೀಗಳು ಸನ್ಮಾನಿಸಿದರು.

ಸಮಾಜಸೇವೆಗಾಗಿ ಡಾ. ವಿ. ಎಸ್. ಆಚಾರ್ಯ ಅವರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗಿದ್ದು, ಅವರ ಪುತ್ರ ಡಾ. ರವಿರಾಜ ಆಚಾರ್ಯ ಸ್ವೀಕರಿಸಿದರು.

ಚೆನ್ನೈ ಹೋಟೆಲ್ ಉದ್ಯಮಿಗಳಾದ ಕೆ. ಲಕ್ಷ್ಮೀನಾರಾಯಣ ರಾವ್ ಮತ್ತು ರಾಮಪ್ರಸಾದ ಭಟ್ ಅವರನ್ನು ವಿಶೇಷವಾಗಿ ಪುರಸ್ಕರಿಸಲಾಯಿತು.

ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು. ಮಠದ ಆಸ್ಥಾನ ವಿದ್ವಾಂಸ ಕೃಷ್ಣರಾಜ ಭಟ್ ಕುತ್ಪಾಡಿ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಬೆಂಗಳೂರು ಲೋಕ ಶಿಕ್ಷಣ ಟ್ರಸ್ಟ್ ವಿಶ್ವಸ್ಥ, ಯಕ್ಷ ಕಲಾ ಪೋಷಕ ಟಿ. ಶ್ಯಾಮ ಭಟ್ ಸಹಕಾರದೊಂದಿಗೆ ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಕಲಾವಿದರಿಂದ ಶುಕ್ರನಂದನೆ ಪ್ರಸಂಗದ ತೆಂಕುತಿಟ್ಟಿನ ಯಕ್ಷಗಾನ ಪ್ರದರ್ಶನ ನಡೆಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!