ಸುದ್ದಿಕಿರಣ ವರದಿ
ಗುರುವಾರ, ಜೂನ್ 16
ಸಮಾವೇಶ ಯಶಸ್ವಿಗೊಳಿಸಿ
ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಂಟು ವರ್ಷ ಪೂರೈಸಿರುವ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಮೇ 30ರಿಂದ ಜೂನ್ 14ರ ವರೆಗೆ ಹಮ್ಮಿಕೊಂಡಿರುವ ‘ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ’ ಅಭಿಯಾನ ಯಶಸ್ವಿಯಾಗಿದೆ.
ಇದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೂಚಿಸಿರುವ ರಾಜ್ಯ ಮಟ್ಟದ ‘ಜನಪ್ರತಿನಿಧಿ ಸಮಾವೇಶ’ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ರಾಜ್ಯದ ನಾಯಕರ ಉಪಸ್ಥಿತಿಯಲ್ಲಿ ಜೂ. 18ರಂದು ಚಿತ್ರದುರ್ಗದಲ್ಲಿ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ ನಾಯಕ್ ಕುಯಿಲಾಡಿ ತಿಳಿಸಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ನಡೆದ ಜನಪ್ರತಿನಿಧಿ ಸಮಾವೇಶ ಮತ್ತು ವಿಶ್ವ ಯೋಗ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೂನ್ 18ರ ಜನಪ್ರತಿನಿಧಿ ಸಮಾವೇಶಕ್ಕೆ ಉಡುಪಿ ಜಿಲ್ಲೆಯಿಂದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ನಗರಸಭೆ ಮತ್ತು ಪುರಸಭೆ ಸದಸ್ಯರು ಭಾಗವಹಿಸಿ ಸಮಾವೇಶದ ಯಶಸ್ಸಿಗೆ ಕೈಜೋಡಿಸಬೇಕು ಎಂದರು.
ಸಮಾವೇಶದ ಅಪೇಕ್ಷಿತ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆಯ ಪೂರ್ವಸಿದ್ಧತೆ ಬಗ್ಗೆ ಜಿಲ್ಲಾ ಸಂಚಾಲಕರಾದ ಪ್ರಭಾಕರ ಪೂಜಾರಿ, ಬಾಲಕೃಷ್ಣ ಶೆಟ್ಟಿ, ರಾಜೀವ್ ಕುಲಾಲ್ ಹಾಗೂ ಮಂಡಲಗಳ ಅಧ್ಯಕ್ಷರು ಮಾಹಿತಿ ನೀಡಿದರು.
ಜೂ. 21ರಂದು ನಡೆಯುವ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಕ್ಷದ ವಿವಿಧ ಸ್ತರಗಳವರು ಭಾಗವಹಿಸುವರು ಎಂದು ಕುಯಿಲಾಡಿ ತಿಳಿಸಿದರು.
ಯೋಗ ದಿನಾಚರಣೆ ಬಗ್ಗೆ ಜಿಲ್ಲಾ ಸಂಚಾಲಕ ಮಹೇಶ್ ಠಾಕೂರ್ ಮಾಹಿತಿ ನೀಡಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಜೂ. 21ರ ಸಂಜೆ 5ರಿಂದ 7ರ ವರೆಗೆ ಉಡುಪಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಾ. ತನ್ಮಯ್ ಗೋಸ್ವಾಮಿ ಯೋಗ ಮತ್ತು ಶಿಸ್ತುಬದ್ಧ ಜೀವನ ಬಗ್ಗೆ ಮಾರ್ಗದರ್ಶನ ಮಾಡಲಿದ್ದು, ಯೋಗ ಶಿಕ್ಷಕಿ ಶೋಭಾ ಶೆಟ್ಟಿ ಇಂದ್ರಾಳಿ ಯೋಗಾಭ್ಯಾಸ ತರಗತಿ ನಡೆಸಿಕೊಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ ಮತ್ತು ಸದಾನಂದ ಉಪ್ಪಿನಕುದ್ರು, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರೇಶ್ಮಾ ಶೆಟ್ಟಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ ಮತ್ತು ಗಿರೀಶ್ ಎಮ್. ಅಂಚನ್, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಮೊದಲಾದವರಿದ್ದರು