ಉಡುಪಿ: ಕೊಡವೂರು ಕಲ್ಮತ್ ಮಸೀದಿ ಪ್ರಕರಣದಲ್ಲಿ ಒಂದು ಸಮುದಾಯವನ್ನು ಮೆಚ್ಚಿಸಲು ಶಾಸಕರು ಇನ್ನೊಂದು ಸಮುದಾಯಕ್ಕೆ ಅನ್ಯಾಯ ಎಸಗಿದ್ದಾರೆ. ಇದು ಸಮುದಾಯಗಳ ನಡುವೆ ಬಿರುಕು ತರುವ ಪ್ರಯತ್ನ ಎಂದು ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ಜನರ ಆರ್.ಟಿ.ಸಿ ಬದಲಾವಣೆಗೆ ಕಂದಾಯ ಇಲಾಖೆ ವರ್ಷಾನುಗಟ್ಟಲೆ ಅಲೆದಾಡಿಸುತ್ತದೆ. ಆದರೆ, ತರಾತುರಿಯಲ್ಲಿ ಶಾಸಕರು ಆರ್.ಟಿ.ಸಿ ಬದಲಾಯಿಸಿ ಅನ್ಯಾಯ ಮಾಡಿದ್ದಾರೆ. ಈ ಜಾಗವು ವಕ್ಫ್ ನೋಟಿಫಿಕೇಷನ್ ಮಾಡಿದ್ದು ಬಿಜೆಪಿ ಸರಕಾರ. ನೋಟಿಫಿಕೇಷನ್ ಮಾಡುವ ಸಂದರ್ಭದಲ್ಲಿ ಎಲ್ಲ ಕಾನೂನಾತ್ಮಕ ಪ್ರಕ್ರಿಯೆ ಅನುಸರಿಸಲಾಗಿದೆ. ಈಗ ಏಕಾಏಕಿ ಬದಲಾವಣೆ ಮಾಡಿರುವುದು ಖಂಡನೀಯ.
ಈ ರೀತಿಯ ಅನ್ಯಾಯವನ್ನು ಖಂಡಿತವಾಗಿಯೂ ಪ್ರಜ್ಞಾವಂತ ನಾಗರಿಕರು ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಅಮೃತ ಶೆಣೈ ಎಚ್ಚರಿಸಿದ್ದಾರೆ