ಸುದ್ದಿಕಿರಣ ವರದಿ
ಶನಿವಾರ, ಜನವರಿ 1, 2022
ವರ್ಷದ ಪ್ರಾರಂಭದಲ್ಲೇ ಕೇಂದ್ರ ಸರಕಾರದ ಕೊಡುಗೆ ಸ್ವಾಗತಾರ್ಹ
ಉಡುಪಿ: ವರ್ಷದ ಪ್ರಥಮ ದಿನದಂದೇ ನಾಡಿನ ರೈತಾಪಿ ವರ್ಗಕ್ಕೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 10ನೇ ಕಂತು ಬಿಡುಗಡೆಯ ಪ್ರಧಾನಿ ನರೇಂದ್ರ ಮೋದಿ ನಡೆ ಸ್ವಾಗತಾರ್ಹ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.
ಜೊತೆಗೆ ಜಿಲ್ಲೆಯ ಕೇಂದ್ರ ಸ್ಥಾನವಾಗಿರುವ ಉಡುಪಿ ನಗರವನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರಿ 169ಎ ಇದರ 2 ಪ್ರಮುಖ ಕೊಂಡಿಗಳಾಗಿರುವ ಹೆಬ್ರಿ- ಪರ್ಕಳ ಮತ್ತು ಆದಿವುಡುಪಿ ಕರಾವಳಿ ಜಂಕ್ಷನ್- ಮಲ್ಪೆ ನಡುವೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರಕಾರ 355.72 ಕೋಟಿ ರೂ. ಅನುದಾನ ಮಂಜೂರು ಮಾಡಿರುವುದು ಪ್ರಶಂಸನೀಯ.
ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಈ ಬಹು ನಿರೀಕ್ಷಿತ ಯೋಜನೆಗೆ ಮಂಜೂರಾತಿ ನೀಡಿ, ಈ ವಿಚಾರವನ್ನು ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿರುವ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ವಿವಿಧ ಜನಪರ ಯೋಜನೆಗಳ ಮೂಲಕ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬದ್ಧತೆಯಿಂದ ಶ್ರಮಿಸುತ್ತಿರುವ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಜಿಲ್ಲೆಯ ನಾಗರಿಕರ ಪರವಾಗಿ ಉಡುಪಿ ಜಿಲ್ಲಾ ಬಿಜೆಪಿ ಹಾರ್ದಿಕ ಅಭಿನಂದನೆ ಸಲ್ಲಿಸುತ್ತದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಮತ್ತು ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.