Saturday, July 2, 2022
Home ಸಮಾಚಾರ ರಾಜ್ಯ ವಾರ್ತೆ ಸರಕಾರಿ ದಾಖಲೆಗಳಲ್ಲಿ ಜಾತಿ ಕಾಲಂ ರದ್ದು ಮಾಡಲು ಸಲಹೆ

ಸರಕಾರಿ ದಾಖಲೆಗಳಲ್ಲಿ ಜಾತಿ ಕಾಲಂ ರದ್ದು ಮಾಡಲು ಸಲಹೆ

ಉಡುಪಿ: ಸರಕಾರಿ ದಾಖಲೆಗಳಲ್ಲಿ ಜಾತಿ ಕಾಲಂ ರದ್ದು ಮಾಡಿ.
ಇದು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಸಲಹೆ.
ಇಲ್ಲಿನ ರಥಬೀದಿ ಕನಕ ಗುಡಿ ಮುಂಭಾಗದಲ್ಲಿ ಗುರುವಾರ ಪರ್ಯಾಯ ಅದಮಾರು ಶ್ರೀಕೃಷ್ಣ ಮಠ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ಗತಿವಿಧಿ ವತಿಯಿಂದ ಆಯೋಜಿಸಿದ್ದ ಕನಕದಾಸ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಸರಕಾರಕ್ಕೆ ನಿಜವಾಗಿಯೂ ಜಾತಿ ಪದ್ಧತಿ ನಿರ್ಮೂಲನೆ ಆಗಬೇಕೆಂಬ ಬಯಕೆ ಇದ್ದರೆ ಎಲ್ಲಾ ಸರಕಾರಿ ದಾಖಲೆಗಳಲ್ಲಿ ಜಾತಿ ಕಾಲಂ ರದ್ದು ಮಾಡಬೇಕು ಎಂದು ಹೇಳಿದರು.
ಜೊತೆಗೆ ಎಲ್ಲರಿಗೂ ಸಂಸ್ಕೃತ ಕಲಿಸುವ ಕೆಲಸ ಆಗಬೇಕು. ಅದರಿಂದ ಜನರು ಶಾಸ್ತ್ರಗಳಲ್ಲಿ ಏನಿದೆ ಎಂಬುದನ್ನು ಸ್ವತಃ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ರಾಜಕೀಯ ಉದ್ದೇಶದ ಮಾತುಗಳನ್ನು ಪರಿಶೀಲಿಸಿ, ಅನುಷ್ಠಾನಕ್ಕೆ ಮಾಡಲು ಇದು ಸಕಾಲ ಎಂದವರು ಆಶಯ ವ್ಯಕ್ತಪಡಿಸಿದರು.
ಸ್ವತಃ ಶಾಸ್ತ್ರಗಳನ್ನು ಅಧ್ಯಯನ ಮಾಡಿ ಅದರಲ್ಲಿನ ಗಹನ ವಿಚಾರಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕಾರ್ಯವನ್ನು ದಾಸರು ಮಾಡಿದ್ದಾರೆ. ಕನಕ ದಾಸರ ಕೀರ್ತನೆಗಳ ಅನುಷ್ಠಾನ ಆಗಬೇಕು. ಕನಕ ಜಯಂತಿ ಆಚರಣೆ ಒಂದು ದಿನಕ್ಕೆ ಸೀಮಿತಗೊಳ್ಳದೆ ಪ್ರತಿನಿತ್ಯ ಅವರ ಸಾಹಿತ್ಯದ ಅಧ್ಯಯನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು ಎಂದವರು ಸಲಹೆ ನೀಡಿದರು.
ಆರ್.ಎಸ್.ಎಸ್. ಜಿಲ್ಲಾ ಸಂಘ ಚಾಲಕ ಪ್ರೊ. ನಾರಾಯಣ ಶೆಣೈ, ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲೆಸಾರ್, ಸದಸ್ಯೆ ತಾರಾ ಆಚಾರ್ಯ, ಕುರುಬರ ಸಂಘದ ನಿರ್ದೇಶಕ ಬಸವರಾಜು ಇದ್ದರು. ಸಾಮರಸ್ಯ ಗಿತಿವಿಧಿ ಪ್ರಮುಖ್ ಸುರೇಶ್ ಪರ್ಕಳ ಪ್ರಸ್ತಾವನೆಗೈದರು.
ಈ ಸಂದರ್ಭದಲ್ಲಿ ನಿರಂತರ ಭಜನೆ ನಡೆಸುತ್ತಿರುವ ಬಾಲರಾಜ್ ಎಸ್. ಪೂಜಾರ್, ಕನಕ ಗುಡಿ ಸ್ವಚ್ಛತಾ ಕಾರ್ಯ ಮಾಡುತ್ತಿರುವ ಚಂದ್ರಶೇಖರ್, ಪೌರ ಕಾರ್ಮಿಕ ಸುಧೀಂದ್ರ, ಸಾಂಪ್ರದಾಯಿಕ ಕಸಬು ಮಾಡುತ್ತಿರುವ ಶಾರದಾ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ಕನಕ ಸದ್ಭಾವನ ಜ್ಯೋತಿ ರಥಯಾತ್ರೆ ಸಮಿತಿ ಅಧ್ಯಕ್ಷ ಓಂ ಕೃಷ್ಣಮೂರ್ತಿ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಹಾಲುಮತ ಮಹಾಸಭಾ ಸದಸ್ಯರಿಂದ ಕನಕದಾಸರ ಮೂರ್ತಿಗೆ ವಿಶೇಷ ಪೂಜೆ ನಡೆಯಿತು.

ಉಡುಪಿಯಲ್ಲಿ ಕನಕನಿಗೆ ನಿತ್ಯ ಗೌರವ
ಉಡುಪಿಯಲ್ಲಿ ಕೃಷ್ಣ ಭಕ್ತ ಕನಕದಾಸರಿಗೆ ನಿತ್ಯ ಗೌರವ ಸಮರ್ಪಿಸಲಾಗುತ್ತಿದೆ. ಅವರ ಹೆಸರಿನಲ್ಲಿ ನಿತ್ಯ ನೈವೇದ್ಯ ಸಲ್ಲಿಸಲಾಗುತ್ತಿದೆ. ಕನಕ ದಾಸರ ಕೀರ್ತನೆಗಳನ್ನು ಪೂಜೆ ಸಂದರ್ಭದಲ್ಲಿ ಹಾಡಲಾಗುತ್ತದೆ. ಮಾತ್ರವಲ್ಲ, ತುಳುನಾಡಿನ ಮನೆ ಮನೆಗಳಲ್ಲಿ ಹಾಡಲಾಗುತ್ತಿದೆ. ಆ ಮೂಲಕ ಕನಕ ದಾಸರಿಗೆ ಅಗ್ರಮಾನ್ಯ ಸ್ಥಾನ ನೀಡಲಾಗಿದೆ ಎಂದು ಶ್ರೀಗಳು ಹೇಳಿದರು.

ಕನ್ನಡಕ್ಕೆ ಗೌರವ
ತುಳುನಾಡಿನಲ್ಲಿ ಕನ್ನಡವನ್ನು ಉಳಿಸುವ ಕಾರ್ಯವನ್ನು ಸ್ವಯಂಪ್ರೇರಣೆಯಿಂದ ಜನರು ಮಾಡುತ್ತಿದ್ದಾರೆ. ದಾಸ ಪರಂಪರೆ ಅದಕ್ಕೆ ಮಹತ್ತರ ಕೊಡುಗೆ ನೀಡಿದೆ. ರಾಜಾಂಗಣದಲ್ಲಿ ನಡೆಯುವ ಶೇ. 99ರಷ್ಟು ಕಾರ್ಯಕ್ರಮ ಕನ್ನಡದಲ್ಲೇ ನಡೆಯುತ್ತಿದೆ ಎಂದು ಶ್ರೀಗಳು ನಾಮಫಲಕ ವಿವಾದದ ಬಗ್ಗೆ ಸ್ಪಷ್ಟೀಕರಣ ನೀಡಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!