Saturday, August 13, 2022
Home ಸಮಾಚಾರ ರಾಜ್ಯ ವಾರ್ತೆ ಕೃಷ್ಣಾಪುರಶ್ರೀ ಸರ್ವಜ್ಞ ಪೀಠಾರೋಹಣ

ಕೃಷ್ಣಾಪುರಶ್ರೀ ಸರ್ವಜ್ಞ ಪೀಠಾರೋಹಣ

ಸುದ್ದಿಕಿರಣ ವರದಿ
ಮಂಗಳವಾರ, ಜನವರಿ 18

ಕೃಷ್ಣಾಪುರಶ್ರೀ ಸರ್ವಜ್ಞ ಪೀಠಾರೋಹಣ
ಉಡುಪಿ: ಆಚಾರ್ಯ ಮಧ್ವ ಪ್ರಣೀತ, ವಾದಿರಾಜ ಯತಿ ರೂಪಿತ ದ್ವೈವಾರ್ಷಿಕ ಶ್ರೀಕೃಷ್ಣ ಪೂಜಾ ಕೈಂಕರ್ಯ ಸ್ವೀಕರಿಸಲು ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಮಂಗಳವಾರ ಪ್ರಾತಃಕಾಲ 5.55ರ ಸುಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣಗೈದು ಪರ್ಯಾಯ ಸ್ವೀಕರಿಸಿದರು.

ನಿರ್ಗಮನ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅಕ್ಷಯಪಾತ್ರೆ ಹಸ್ತಾಂತರ ಮಾಡಿದರು.

ಕೃಷ್ಣಾಪುರ ಶ್ರೀಪಾದರ ಪರ್ಯಾಯ 2024ರ ಜ. 17ರ ವರೆಗೆ ಇರಲಿದೆ. ಇದು ಶ್ರೀಪಾದರ ನಾಲ್ಕನೇ ಪರ್ಯಾಯ.

ದೇವರ ದರ್ಶನ
ಜೋಡುಕಟ್ಟೆಯಿಂದ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಆಗಮಿಸಿದ ಭಾವಿ ಪರ್ಯಾಯ ಕೃಷ್ಣಾಪುರ ಶ್ರೀಪಾದರು ರಥಬೀದಿಯಲ್ಲಿ ಕನಕನ ಕಿಂಡಿಯಲ್ಲಿ ಶ್ರೀಕೃಷ್ಣ ದರ್ಶನ ಮಾಡಿ ನವಗ್ರಹ ದಾನ ನೀಡಿದರು.

ಬಳಿಕ ಚಂದ್ರಮೌಳೀಶ್ವರ ಮತ್ತು ಅನಂತೇಶ್ವರ ದೇವರ ದರ್ಶನ ಪಡೆದರು. ಅನಂತೇಶ್ವರದಲ್ಲಿನ ಶ್ರೀ ಮಧ್ವಾಚಾರ್ಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಸಿ, ಶ್ರೀಕೃಷ್ಣ ಮಠಕ್ಕೆ ಆಗಮಿಸಿದರು.

ಶ್ರೀಕೃಷ್ಣಮಠಕ್ಕಾಮಿಸಿದ ಕೃಷ್ಣಾಪುರ ಶ್ರೀಪಾದರನ್ನು ಪರ್ಯಾಯ ಪೀಠಸ್ಥ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸ್ವಾಗತಿಸಿದರು.

ಶ್ರೀಕೃಷ್ಣ ದೇವರ ದರ್ಶನ ಪಡೆದು, ಕೃಷ್ಣಾಪುರ ಮಠದ ಪಟ್ಟದ ದೇವರಿಗೆ ಮಂಗಳಾರತಿ ಬೆಳಗಿ, ಚಂದ್ರಶಾಲೆಯಲ್ಲಿ ಪರ್ಯಾಯ ಅದಮಾರು ಮಠದ ವತಿಯಿಂದ ಮಾಲಿಕಾ ಮಂಗಳಾರತಿ ನಡೆಯಿತು.

ಅಕ್ಷಯ ಪಾತ್ರೆ ಹಸ್ತಾಂತರ
ಮಧ್ವಾಚಾರ್ಯರ ಸನ್ನಿಧಿ ಎದುರು ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರಿಗೆ ಮಧ್ವಾಚಾರ್ಯರು ಕರುಣಿಸಿದ ಅಕ್ಷಯ ಪಾತ್ರೆ ಹಾಗೂ ಬೆಳ್ಳಿ ಸಟ್ಟುಗ ಹಸ್ತಾಂತರ ಮಾಡಿದರು.

ಸರ್ವಜ್ಞ ಪೀಠಾರೋಹಣ
ನಂತರ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರನ್ನು ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಸ್ತಲಾಘವದೊಂದಿಗೆ ಕರೆದೊಯ್ದು, ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸಿ, ಆಶೀರ್ವಾದ ಪಡೆದರು.

ಬಳಿಕ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರಿಂದ ಬಡಗುಮಾಳಿಗೆಯ ಅರಳು ಗದ್ದುಗೆಯಲ್ಲಿ ಎಲ್ಲ ಯತಿಗಳಿಗೆ ಗಂದಾದ್ಯುಪಚಾರ, ಅಷ್ಟ ಮಠಾಧೀಶರಿಂದ ಪಟ್ಟಕಾಣಿಕೆ ಸಲ್ಲಿಕೆ ಹಾಗೂ ಮಾಲಿಕಾ ಮಂಗಳಾರತಿ ನಡೆಯಿತು.

ಬಳಿಕ ರಾಜಾಂಗಣದಲ್ಲಿ ದರ್ಬಾರ್ ಸಭೆ ನಡೆಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!