Tuesday, May 17, 2022
Home ಸಮಾಚಾರ ರಾಜ್ಯ ವಾರ್ತೆ ಮೇ 14ರಂದು ಸಹಬಾಳ್ವೆ ಸಮಾವೇಶ

ಮೇ 14ರಂದು ಸಹಬಾಳ್ವೆ ಸಮಾವೇಶ

ಸುದ್ದಿಕಿರಣ ವರದಿ
ಭಾನುವಾರ, ಮೇ 8

ಮೇ 14ರಂದು ಸಹಬಾಳ್ವೆ ಸಮಾವೇಶ
ಉಡುಪಿ: ಅಂಬೇಡ್ಕರ್, ಬಸವಣ್ಣ, ನಾರಾಯಣ ಗುರು, ಕುವೆಂಪು ಆಶಯದ ಸರ್ವ ಜನಾಂಗದ ಶಾಂತಿಯ ತೋಟದ ಆಶಯ ಈಡೇರಿಸುವ ನಿಟ್ಟಿನಲ್ಲಿ ಬಹುತ್ವ ಭಾರತದ ಬೃಹತ್ ರಾಜ್ಯ ಮಟ್ಟದ ಸಾಮರಸ್ಯ ನಡಿಗೆ ಹಾಗೂ ಸಹಬಾಳ್ವೆ ಸಮಾವೇಶ ಈ ತಿಂಗಳ 14ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶ ಸಂಚಾಲಕ ಸಮಿತಿಯ ಕೆ. ಎಲ್. ಅಶೋಕ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಬಾಳ್ವೆ ಉಡುಪಿ ಮತ್ತು ಕರ್ನಾಟಕದ ಸಮಸ್ತ ಸೌಹಾರ್ದ ಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಮಿಷನ್ ಕಂಪೌಂಡಿನ ಕ್ರಿಶ್ಚಿಯನ್ ಶಾಲೆ ಮೈದಾನದಲ್ಲಿ ಸಮಾವೇಶ ನಡೆಯಲಿದೆ.

ಅಂದು ಅಪರಾಹ್ನ 4 ಗಂಟೆಗೆ ಸರ್ವ ಧರ್ಮಗಳ ಧಾರ್ಮಿಕ ಗುರುಗಳು ಉದ್ಘಾಟಿಸಲಿದ್ದಾರೆ. ಅಪರಾಹ್ನ 2 ಗಂಟೆಗೆ ಅಜ್ಜರಕಾಡು ಹುತಾತ್ಮ ಸ್ಮಾರಕ ಚೌಕದ ಬಳಿಯಿಂದ ಸಾಮರಸ್ಯ ನಡಿಗೆ ಆರಂಭಗೊಳ್ಳಲಿದ್ದು, ವಿವಿಧ ರಾಜ್ಯ ಸಂಘಟನೆಗಳ ನಾಯಕರು ಚಾಲನೆ ನೀಡುವರು. ಸಮಾವೇಶದಲ್ಲಿ ಸೌಹಾರ್ದ ಪರಂಪರೆ ಬಿಂಬಿಸುವ ಗೀತೆಗಳ ಗಾಯನವನ್ನು ಖ್ಯಾತ ಗಾಯಕಿ ಎಂ. ಡಿ. ಪಲ್ಲವಿ ಮತ್ತು ತಂಡ ನಡೆಸಿಕೊಡಲಿದೆ ಎಂದರು.

ಸಮಾವೇಶದಲ್ಲಿ ರಾಜ್ಯ ಮಟ್ಟದ ದಲಿತ, ಆದಿವಾಸಿ, ರೈತ, ಗಿರಿಜನ, ಅಲೆಮಾರಿ, ಲೈಂಗಿಕ ಅಲ್ಪಸಂಖ್ಯಾತರು, ಮುಸ್ಲಿಮರು, ಕ್ರಿಶ್ಚಿಯನ್ನರು, ಮಹಿಳೆಯರು, ಕಾರ್ಮಿಕ, ಕನ್ನಡ ಪರ ಸಂಘಟನೆಗಳು ಭಾಗವಹಿಸಲಿವೆ.

ರಾಜಕೀಯ, ಸಾಮಾಜಿಕ ವಾತಾವರಣ ಕಲುಷಿತಗೊಳ್ಳುತ್ತಿದ್ದು ದ್ವೇಷವೇ ನಮ್ಮ ಇತಿಹಾಸ ಬಿಂಬಿಸುತ್ತಿದೆ. ಧರ್ಮ ರಾಜಕಾರಣವೇ ಪ್ರಸ್ತುತ ವಿರ್ಯಮಾನ ಎಂಬ ಚರ್ಚೆ ನಡೆಯುವಂತೆ ಮಾಡಲಾಗುತ್ತದೆ ಎಂದು ಅಶೋಕ್ ವಿವರಿಸಿದರು.

ಮುಂದಿನ ತಲೆಮಾರು ಈ ನೆಲದ ಸೌಹಾರ್ದ, ಸಹಬಾಳ್ವೆಯ ರಥವನ್ನು ಮುನ್ನಡೆಸುವ ನಿಟ್ಟಿನಲ್ಲಿ ಬಹಳ ದೊಡ್ಡ ನಿರ್ಣಯವೊಂದನ್ನು ಈ ಸಮಾವೇಶದಲ್ಲಿ ತೆಗೆದುಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಬಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದೇವರು, ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಉಡುಪಿ ಜಿಲ್ಲಾ ಖಾಝಿ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಪುತ್ತೂರು ಮಲಂಕರ ಕ್ಯಾಥೋಲಿಕ್ ಚರ್ಚ್ ಬಿಷಪ್ ವರ್ಗೀಸ್ ಮಾರ್ ಮಕರಿಯೋಸ್, ಮೈಸೂರು ಬಸವ ಜ್ಞಾನ ಮಂದಿರದ ಡಾ| ಮಾತೆ ಬಸವಾಂಜಲಿದೇವಿ, ಬೆಳಗಾವಿ ಬಸವ ಮಂಟಪದ ಬಸವ ಧರ್ಮ ಪೀಠದ ಶ್ರೀ ಬಸವ ಪ್ರಕಾಶ್ ಸ್ವಾಮೀಜಿ, ಬೆಂಗಳೂರು ಲೋಕರತ್ನ ಬುದ್ಧ ವಿಹಾರದ ಭಂತೆ ಮಾತೆ ಮೈತ್ರಿ, ಕರ್ನಾಟಕ ಜಮೀಯ್ಯತುಲ್ ಉಲೆಮಾಯೆ ಹಿಂದ್ ಅಧ್ಯಕ್ಷ ಮೌಲಾನ ಇಫ್ತಿಕಾರ್ ಅಹ್ಮದ್ ಖಾಸ್ಮಿ, ಆರ್ಯ ಈಡಿಗ ಮಹಾಮಂಡಳಿ ರಾಷ್ಟ್ರೀಯ ಅಧ್ಯಕ್ಷ ಡಾ| ಪ್ರಣವಾನಂದ ಸ್ವಾಮೀಜಿ, ಕರ್ನಾಟಕ ಸುನ್ನೀ ಯುವಜನ ಸಂಘ ಅಧ್ಯಕ್ಷ ಡಾ| ಎಂ. ಎಸ್. ಎಂ.ಅಬ್ದುಲ್ ರಶೀದ್ ಸಖಾಫಿ, ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ರೆ| ಡಾ| ಹರ್ಬಟ್ ಎಂ. ವಾಟ್ಸನ್, ಕರ್ನಾಟಕ ರಾಜ್ಯ ದಾರಿಮಿ ಉಲೆಮಾ ಒಕ್ಕೂಟ ಕಾರ್ದರ್ಶಿ ಯು. ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಉಡುಪಿ ಕ್ರೈಸ್ತ ಧರ್ಮಪ್ರಾಂತ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ| ಚೇತನ್ ಲೋಬೊ, ಮಣಿಪಾಲ ಗುರುದ್ವಾರದ ಜ್ಞಾನಿ ಬಲರಾಜ್ ಸಿಂಗ್ ಭಾಗವಹಿಸುವರು ಎಂದು ಟಿ. ಎಲ್. ಅಶೋಕ್ ವಿವರಿಸಿದರು.

ವಿಶೇಷ ಅತಿಥಿಗಳಾಗಿ ಮಾನವ ಹಕ್ಕುಗಳ ಹೋರಾಟಗಾರ ಯೋಗೇಂದ್ರ ಯಾದವ್, ಕರ್ನಾಟಕ ಕ್ರೈಸ್ತ ಸಂಘಗಳ ಅಂತಾರಾಷ್ಟ್ರೀಯ ಒಕ್ಕೂಟ ಅಧ್ಯಕ್ಷ ಡಾ| ರೊನಾಲ್ಡ್ ಕೊಲಾಸೊ, ನಿವೃತ್ತ ಐಎಎಸ್ ಅಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತ ಶಶಿಕಾಂತ್ ಸೆಂಥಿಲ್ ಭಾಗವಹಿಸಲಿದ್ದು, ದಸಂಸ ಮುಖಂಡರಾದ ಮಾವಳ್ಳಿ ಶಂಕರ್, ಆರ್. ಮೋಹನ್ ರಾಜ್, ರೈತ ಮುಖಂಡರಾದ ಎಚ್. ಆರ್. ಬಸವರಾಜಪ್ಪ, ಚಾಮರಸ ಮಾಲಿ ಪಾಟೀಲ್, ಚುಕ್ಕಿ ನಂಜುಂಡಸ್ವಾಮಿ, ಮಹಿಳಾ ಹಕ್ಕು ಹೋರಾಟಗಾರ್ತಿ ಕೆ. ನೀಲಾ, ಡಾ| ಬೆಳಗಾಮಿ ಮುಹಮ್ಮದ್ ಸಅದ್, ಸಬೀಹಾ ಫಾತಿಮ, ನಜ್ಮಾ ಚಿಕ್ಕನೇರಳೆ  ಭಾಗವಹಿಸುವರು.

ಅಜ್ಜರಕಾಡು ಹುತಾತ್ಮ ಸ್ಮಾರಕದಿಂದ ಆರಂಭಗೊಳ್ಳುವ ಸಾಮರಸ್ಯದ ನಡಿಗೆ ಜೋಡುಕಟ್ಟೆ, ಕೋರ್ಟ್ ರಸ್ತೆ, ಹಳೆಯ ಡಯಾನ ಸರ್ಕಲ್, ಕೆ. ಎಂ. ಮಾರ್ಗ, ಸರ್ವಿಸ್ ಬಸ್ ನಿಲ್ದಾಣವಾಗಿ ವಾಪಾಸು ಅದೇ ಮಾರ್ಗದಲ್ಲಿ ಸಂಚರಿಸಿ, ಮಿಷನ್ ಕಂಪೌಂಡಿನ ಮೈದಾನದಲ್ಲಿ ಸಮಾಪ್ತಿಗೊಳ್ಳಲಿದೆ. ನಡಿಗೆಯಲ್ಲಿ ದೇಶ ಹಾಗೂ ಸ್ಥಳೀಯ ಸೌಹಾರ್ದ ಸಂಸ್ಕೃತಿ ಬಿಂಬಿಸುವ 20ಕ್ಕೂ ಅಧಿಕ ಟ್ಯಾಬ್ಲೊ ಹಾಗೂ ಸಾಂಸ್ಕೃತಿಕ ತಂಡಗಳು ಮೆರವಣಿಗೆಯಲ್ಲಿಲಿವೆ.

ರಾಜ್ಯ ಮಟ್ಟದ ಈ ಐತಿಹಾಸಿಕ ಸಮಾವೇಶದಲ್ಲಿ ಸುಮಾರು 20- 25 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದ್ದು, ಸಮಾವೇಶಕ್ಕಾಗಿ ಸುಮಾರು 300 ಮಂದಿ ಸ್ವಯಂ ಸೇವಕರನ್ನು ನಿಯೋಜಿಸಲಾಗುತ್ತದೆ. ಅಲ್ಲದೆ ಎಲ್ಲರೂ ಸಮಾವೇಶ ವೀಕ್ಷಿಸಲು ಅನುಕೂಲವಾಗುವಂತೆ ಮೈದಾನದ ನಾಲ್ಕು ಕಡೆಗಳಲ್ಲಿ ಎಲ್.ಇಡಿ ಪರದೆ ಆಳವಡಿಸಲಾಗುವುದು ಎಂದು ಅಶೋಕ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮಾವೇಶದ ಸಂಚಾಲಕ ಸಮಿತಿ ಪದಾಧಿಕಾರಿಗಳಾದ ಅಮೃತ್ ಶೆಣೈ, ಸುಂದರ ಮಾಸ್ತರ್, ಯಾಸೀನ್ ಮಲ್ಪೆ, ಹುಸೇನ್ ಕೋಡಿಬೆಂಗ್ರೆ, ಉದ್ಯಾವರ ನಾಗೇಶ್ ಕುಮಾರ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!