Wednesday, August 10, 2022
Home ಸಮಾಚಾರ ರಾಜ್ಯ ವಾರ್ತೆ ಗೌಜಿ ಗದ್ದಲಗಳಿಲ್ಲದ ಸಾಂಪ್ರದಾಯಿಕ ಮೆರವಣಿಗೆ

ಗೌಜಿ ಗದ್ದಲಗಳಿಲ್ಲದ ಸಾಂಪ್ರದಾಯಿಕ ಮೆರವಣಿಗೆ

ಸುದ್ದಿಕಿರಣ ವರದಿ
ಮಂಗಳವಾರ, ಜನವರಿ 18

ಗೌಜಿ ಗದ್ದಲಗಳಿಲ್ಲದ ಸಾಂಪ್ರದಾಯಿಕ ಮೆರವಣಿಗೆ
ಉಡುಪಿ: ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯ ಪರ್ಯಾಯ ಮೆರವಣಿಗೆ ಗೌಜಿ ಗದ್ದಲಗಳಿಲ್ಲದೆ ಸಂಪ್ರದಾಯಕ್ಕೆ ಒತ್ತುಕೊಟ್ಟು ಸರಳವಾಗಿ ನಡೆಯಿತು.

ಪವಿತ್ರ ಸ್ನಾನ
ಸರ್ವಜ್ಞ ಪೀಠಾರೋಹಣದ ಪೂರ್ವಭಾವಿಯಾಗಿ ಭಾವಿ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಕಾಪು ಸಮೀಪದ ದಂಡತೀರ್ಥದಲ್ಲಿ ಶಿಷ್ಯರೊಂದಿಗೆ ಸ್ನಾನ ಮಾಡಿದರು.

ಬಳಿಕ ದಂಡತೀರ್ಥ ಮಠದಲ್ಲಿರುವ ಶ್ರೀ ರಾಮಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಜೋಡುಕಟ್ಟೆಗೆ ಆಗಮನ
ಬಳಿಕ ಉಡುಪಿ ಜೋಡುಕಟ್ಟೆಗೆ ಆಗಮಿಸಿದ ಭಾವಿ ಪರ್ಯಾಯ ಕೃಷ್ಣಾಪುರ ಶ್ರೀಪಾದರನ್ನು ಆದರದಿಂದ ಬರಮಾಡಿಕೊಳ್ಳಲಾಯಿತು.

ಅದಾಗಲೇ ರಾಜ ಪೋಷಾಕುವಿನಲ್ಲಿ ಮಂಡಿಸಿದ್ದ ಅಷ್ಟಮಠಗಳ ಇತರ ಯತಿಗಳಾದ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಹಾಗೂ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಮಂಡಿಸಿದ್ದರು.

ಕೃಷ್ಣಾಪುರ ಮಠದ ಉಪಾಸ್ಯದೇವರಿಗೆ ಮಂಗಳಾರತಿ ಬೆಳಗಿ, ಚಿನ್ನದ ಪಲ್ಲಕಿಯಲ್ಲಿರಿಸಲಾಯಿತು.

ಪರ್ಯಾಯ ಮೆರವಣಿಗೆ
ಪ್ರತ್ಯೇಕ ಪುಷ್ಪಾಲಂಕೃತ ಮೇನೆಯಲ್ಲಿ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಮಂಡಿಸಿದರು.

ಬಳಿಕ ಇತರ ಯತಿಗಳು ಆಶ್ರಮ ಶ್ರೇಷ್ಠತೆ ಆಧಾರದಲ್ಲಿ ಪ್ರತ್ಯೇಕವಾದ ಮೇನೆಗಳಲ್ಲಿ ಮಂಡಿಸಿದರು.

ಮೇನೆಗಳನ್ನು ವಾಹನಗಳಲ್ಲಿರಿಸಿ, ಕೊಂಡೊಯ್ಯಲಾಯಿತು.

ಮೆರವಣಿಗೆ ಮಂಗಳವಾರ ನಸುಕಿನ 3.30ಕ್ಕೆ ಆರಂಭಗೊಂಡಿತು.

ಶ್ರೀಮಠದ ಮಕರ ತೋರಣಾದಿ ಬಿರುದುಬಾವಲಿಗಳು, ಚಂಡೆ ವಾದ್ಯಮೇಳಗಳು, ಕೊಂಬು ಕಹಳೆ ಹಾಗೂ ಸೀಮಿತ ಸಂಖ್ಯೆಯ ಟ್ಯಾಬ್ಲೊಗಳು ಮೆರವಣಿಗೆಯಲ್ಲಿ ಸಾಗಿಬಂತು.

ಕೊರೊನಾ ಕಾರಣದಿಂದಾಗಿ ನೈಟ್ ಕರ್ಫ್ಯೂ ಜಾರಿಯಲ್ಲಿದ್ದ ಕಾರಣ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತಾದರೂ ಒಂದಷ್ಟು ಮಂದಿ ಜಮಾಯಿಸಿದ್ದರು.

ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.

ಮುಂಜಾನೆ 4.15ಕ್ಕೆ ರಥಬೀದಿ ಮರವಣಿಗೆ ತಲುಪಿದ್ದು, ಎಲ್ಲ ಯತಿಗಳೂ ಮೇನೆಯಿಂದಿಳಿದು ಶ್ವೇತವಸ್ತ್ರದ ಮೇಲೆ ನಡೆದುಬಂದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!