Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಸಾಧಕದ್ವಯರಿಗೆ ನುಡಿನಮನ

ಸಾಧಕದ್ವಯರಿಗೆ ನುಡಿನಮನ

ಉಡುಪಿ: ಈಚೆಗೆ ನಿಧನರಾದ ರಂಗಕರ್ಮಿ, ಸಾಹಿತಿ ಪ್ರೊ. ಉದ್ಯಾವರ ಮಾಧವ ಆಚಾರ್ಯ ಹಾಗೂ ಶಿಕ್ಷಣತಜ್ಞ, ಪತ್ರಕರ್ತ ಕೆ. ದಾಮೋದರ ಐತಾಳ ಅವರಿಗೆ ಯಕ್ಷಗಾನ ಕಲಾರಂಗ ಮತ್ತು ಇತರ ಸಾಂಸ್ಕೃತಿಕ ಸಂಘಟನೆಗಳ ಆಶ್ರಯದಲ್ಲಿ ಬುಧವಾರ ಪೇಜಾವರ ಮಠದ ಶ್ರೀರಾಮವಿಠಲ ಸಭಾಭವನದಲ್ಲಿ ನುಡಿನಮನ ಸಲ್ಲಿಸಲಾಯಿತು.

ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಕೊಡುಗೆ ನೀಡಿದ ಈರ್ವರು ಮಹನೀಯರ ಬಗ್ಗೆ ಅವರ ಒಡನಾಡಿಗಳು ಮಾತನಾಡಿದರು.

ಅಜ್ಞಾತ ಪ್ರತಿಭೆಗಳಿಗೆ ಬೆಳಕು
ಪ್ರೊ. ಉದ್ಯಾವರ ಮಾಧವ ಆಚಾರ್ಯರ ಬಗ್ಗೆ ಮಾತನಾಡಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ. ಎಲ್. ಸಾಮಗ, ಶಿವರಾಮ ಕಾರಂತ ಮತ್ತು ಬಿ. ವಿ. ಕಾರಂತರ ರಂಗ ಪ್ರಯೋಗಗಳಿಂದ ಪ್ರಭಾವಿತರಾಗಿ ಸ್ವಚಿಂತನೆಯೊಂದಿಗೆ ಯಕ್ಷಗಾನದ ಸಮ್ಮಿಳಿತದೊಂದಿಗೆ ಏಕವ್ಯಕ್ತಿ ಪ್ರಯೋಗದ ಮೂಲಕ ಕರಾವಳಿ ರಂಗಭೂಮಿಯಲ್ಲಿ ಹೊಸತನ ತಂದ ಆಚಾರ್ಯರು, ಅನೇಕ ಅಜ್ಞಾತ ಪ್ರತಿಭೆಗಳಿಗೆ ಬೆಳಕು ನೀಡಿದ್ದರು ಎಂದು ಬಣ್ಣಿಸಿದರು.

ಛಲವಾದಿಯಾಗಿದ್ದ ಅವರು, ಲಭಿಸಿದ ಅವಕಾಶವನ್ನು ಸದ್ವಿನಿಯೋಗಪಡಿಸಿಕೊಳ್ಳುವ ಜೊತೆಗೆ ಸವಾಲುಗಳನ್ನು ಸ್ವೀಕರಿಸುವ ಎದೆಗಾರಿಕೆ ಹೊಂದಿದ್ದರು. ಉಡುಪಿಯ ಸಾಂಸ್ಕೃತಿಕ ಮತ್ತು ರಂಗಭೂಮಿಗೆ ಕೊಡುಗೆ ನೀಡಿದ್ದ ಅವರ್ನು ಸ್ಮರಣೀಯವಾಗಿಸುವ ಕಾರ್ಯ ನಡೆಯಬೇಕು ಎಂದು ಆಶಿಸಿದರು.

ಮಾಧ್ಯಮ, ಶಿಕ್ಷಣ ಮತ್ತು ಗ್ರಾಹಕ ಕ್ಷೇತ್ರಗಳಲ್ಲಿ ದಾಮೋದರ ಐತಾಳರ ಕೊಡುಗೆ ಗಮನೀಯ ಎಂದರು.

ಪ್ರೊ. ರಾಮದಾಸ್, ಎ. ಪಿ. ಕೊಡಂಚ, ಎನ್. ಬಿ. ದೀಕ್ಷಿತ್, ಡಾ| ಮಾಧವಿ ಭಂಡಾರಿ, ಗುರುರಾಜ ಮಾರ್ಪಳ್ಳಿ, ಎಸ್. ವಿ. ಭಟ್, ನಂದಕುಮಾರ್, ಪ್ರೊ. ಕೆ. ಸದಾಶಿವ ರಾವ್, ಡಾ. ಅನ್ನಪೂರ್ಣ ಆಚಾರ್ಯ, ಸುಶೀಲ ರಾವ್, ಡಾ| ಕಾತ್ಯಾಯಿನಿ ಕುಂಜಿಬೆಟ್ಟು ನುಡಿನಮನ ಸಲ್ಲಿಸಿದರು.

ಆರಂಭದಲ್ಲಿ ಕೆ. ಜೆ. ಗಣೇಶ್, ಗುರುರಾಜ ಮಾರ್ಪಳ್ಳಿ, ವಾರಿಜಾಕ್ಷಿ ಆರ್. ಎಲ್. ಭಟ್ ಅವರು ಮಾಧವ ಆಚಾರ್ಯ ವಿರಚಿತ ರಂಗಗೀತೆಗಳನ್ನು ಪ್ರಸ್ತುತಪಡಿಸಿದರು. ಕೆ. ಜೆ. ಸುಧೀಂದ್ರ ಮದ್ದಲೆಯಲ್ಲಿ ಸಹಕರಿಸಿದರು.
ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ. ಗಂಗಾಧರ ರಾವ್ ಪುಷ್ಪನಮನ ಸಲ್ಲಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!