Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಸಿಇಟಿ ಪರೀಕ್ಷೆ: 4,704 ವಿದ್ಯಾರ್ಥಿಗಳು

ಸಿಇಟಿ ಪರೀಕ್ಷೆ: 4,704 ವಿದ್ಯಾರ್ಥಿಗಳು

ಸುದ್ದಿಕಿರಣ ವರದಿ
ಮಂಗಳವಾರ, ಜೂನ್ 14

ಸಿಇಟಿ ಪರೀಕ್ಷೆ: 4,704 ವಿದ್ಯಾರ್ಥಿಗಳು
ಉಡುಪಿ: ಈ ತಿಂಗಳ 16 ಮತ್ತು 17ರಂದು ನಡೆಯುವ 2022ನೇ ಸಾಲಿನ ಇಂಜಿನಿಯರಿಂಗ್, ಕೃಷಿ ವಿಜ್ಞಾನ ಮುಂತಾದ ವೃತ್ತಿಪರ ಕೋರ್ಸ್ ಗಳ ಪ್ರವೇಶಾತಿಗೆ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಜಿಲ್ಲೆಯಲ್ಲಿ 4,704 ಮಂದಿ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಪರೀಕ್ಷೆ ಯಾವುದೇ ಅಕ್ರಮ ನಡೆಯದಂತೆ, ನ್ಯಾಯೋಚಿತವಾಗಿ ಮತ್ತು ಸುಗಮವಾಗಿ ಯಾವುದೇ ಲೋಪದೋಷಗಳಿಲ್ಲದೇ ನಡೆಸಲು ಸರ್ಕಾರ ಸೂಚಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೂಚಿಸಿದರು.

ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆ ನಡೆಸುವ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್ ನಲ್ಲಿ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

8 ಪರೀಕ್ಷಾ ಕೇಂದ್ರ
ಜಿಲ್ಲೆಯಲ್ಲಿ 8 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುವುದು. ಸೂಕ್ತ ಪೊಲೀಸ್ ಭದ್ರತೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಖಜಾನೆಯಿಂದ ತೆಗೆದುಕೊಂಡು ಹೋಗಿ ಪರೀಕ್ಷಾ ಕೇಂದ್ರಗಳಿಗೆ ವಿತರಿಸಲು ತಾಲೂಕಿನ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಪ್ರಾಂಶುಪಾಲರನ್ನೊಳಗೊಂಡ 3 ಸದಸ್ಯರ 4 ನಾಲ್ಕು ತಂಡ ರಚಿಸಲಾಗಿದ್ದು, ಪ್ರತೀ ಪರೀಕ್ಷಾ ಕೇಂದ್ರಕ್ಕೆ ಸಹಾಯಕ ಆಯುಕ್ತರ ಶ್ರೇಣಿಗೆ ಕಡಿಮೆಯಿಲ್ಲದ ಒಬ್ಬರು ಅಧಿಕಾರಿಯನ್ನು ವೀಕ್ಷಕರನ್ನಾಗಿ ನೇಮಿಸಲಾಗುವುದು ಎಂದರು.

ಸೂಕ್ತ ಭದ್ರತೆ
ಪ್ರಶ್ನೆಪತ್ರಿಕೆ ಇರಿಸುವ ಜಿಲ್ಲಾ ಖಜಾನೆಯಲ್ಲಿ ಸಿಸಿ ಟಿವಿ ಕ್ಯಾಮೆರಾ, ಬಯೋಮೆಟ್ರಿಕ್ ಮೆಷಿನ್ ಮತ್ತು ಬಾರ್ ಕೋಡಿಂಗ್ ವ್ಯವಸ್ಥೆ ಅಳವಡಿಸುವಂತೆ ಜಿಲ್ಲಾ ಖಜಾನಾಧಿಕಾರಿ ಮತ್ತು ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಸಿಬ್ಬಂದಿ ನಿಯೋಜಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ, ಪರೀಕ್ಷಾ ಕೇಂದ್ರದ ಕರ್ತವ್ಯಕ್ಕೆ ನಿಯೋಜಿಸುವ ಮುಖ್ಯ ಅಧೀಕ್ಷಕರು ಬೇಸಿಕ್ ಮೊಬೈಲ್ ಮಾತ್ರ ಬಳಸುವಂತೆ ಮತ್ತು ಉಳಿದ ಸಿಬ್ಬಂದಿಗಳು ಕಡ್ಡಾಯವಾಗಿ ಯಾವುದೇ ಮೊಬೈಲ್ ಬಳಕೆ ಮಾಕೂಡದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಗಳು ದೋಷ ರಹಿತವಾಗಿ, ಸುವ್ಯವಸ್ಥಿತವಾಗಿ ಮತ್ತು ಸುಗಮವಾಗಿ ನಡೆಯಲು, ಕರ್ತವ್ಯಕ್ಕೆ ನಿಯೋಜಿಸಿರುವ ಎಲ್ಲಾ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದರು.

ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ. ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವುದಾಗಿ ತಿಳಿಸಿದ ಜಿಲ್ಲಾಧಿಕಾರಿ, ಪರೀಕ್ಷಾ ಕೇಂದ್ರದ ಸಮೀಪದ ಎಲ್ಲಾ ಝೆರಾಕ್ಸ್ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಅಕ್ರಮ ನಡೆಸಿದಲ್ಲಿ ಕ್ರಮ
ಸಾಮಾನ್ಯ ಪ್ರವೇಶ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಗೊಂದಲ ಮೂಡಿಸುವ, ನಕಲಿ ಪ್ರಶ್ನೆಪತ್ರಿಕೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳಿಗೆ ಉತ್ತೇಜನ ನೀಡುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪರೀಕ್ಷಾ ಕೇಂದ್ರದ ಕೊಠಡಿಗಳನ್ನು ಸೂಕ್ತ ರೀತಿಯಲ್ಲಿ ಸ್ಯಾನಿಟೈಸ್ ಮಾಡುವಂತೆ ಮತ್ತು ಥರ್ಮಲ್ ಸ್ಕ್ಯಾನರ್ ನೊಂದಿಗೆ ಅಗತ್ಯ ಸಿಬ್ಬಂದಿ ನಿಯೋಜಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ, ಪಿ.ಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ, ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಗಳು ಹಾಗೂ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ವಿವಿಧ ಅಧಿಕಾರಿಗಳು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!