Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಸಿರಿ ಧಾನ್ಯ ರಫ್ತಿಗೆ ಉತ್ತೇಜನ

ಸಿರಿ ಧಾನ್ಯ ರಫ್ತಿಗೆ ಉತ್ತೇಜನ

ಸಿರಿ ಧಾನ್ಯ ರಫ್ತಿಗೆ ಉತ್ತೇಜನ

(ಸುದ್ದಿಕಿರಣ ವರದಿ)
ಉಡುಪಿ: ಭಾರತದ ಅಪೇಕ್ಷೆಯಂತೆ ವಿಶ್ವಸಂಸ್ಥೆ 2023ನೇ ವರ್ಷವನ್ನು ಸಿರಿ ಧಾನ್ಯಗಳ ವರ್ಷ ಎಂದು ಘೋಷಿಸಿದ್ದು, ಆರೋಗ್ಯದಾಯಕ ಸಿರಿ ಧಾನ್ಯ ಉತ್ಪಾದನೆ ಮತ್ತು ರಫ್ತಿಗೆ ದೇಶದಲ್ಲಿ ಉತ್ತೇಜನ ನೀಡಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಗುರುವಾರ ಜನಾಶೀರ್ವಾದ ಯಾತ್ರೆಯೊಂದಿಗೆ ಉಡುಪಿಗೆ ಆಗಮಿಸಿದ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರೈತ ಪೂರಕ ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಖಾದ್ಯ ತೈಲ ಮತ್ತು ಬೇಳೆಕಾಳು ಉತ್ಪಾದನೆಯಲ್ಲಿ ಭಾರತವಿನ್ನೂ ಸ್ವಾವಲಂಬನೆ ಸಾಧಿಸಿಲ್ಲ. ಕೇರಳ ಮತ್ತು ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದ.ಕ.ಗಳಲ್ಲಿ ತೆಂಗಿನೆಣ್ಣೆ ಹೊರತುಪಡಿಸಿ ಅಡುಗೆಗೆ ಬಳಸುವ ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಅದೂ ಕಲಬೆರಕೆ ಎಣ್ಣೆಯಾಗಿದೆ. ಈ ನಿಟ್ಟಿನಲ್ಲಿ ಎಣ್ಣೆಕಾಳುಗಳ ಉತ್ಪಾದನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಿನಿ ಕಿಟ್ ನೀಡಲಾಗುತ್ತಿದೆ ಎಂದರು.

ಹಣ್ಣು, ತರಕಾರಿ, ಅಕ್ಕಿ ರಫ್ತಿನಲ್ಲಿ ಪ್ರಸ್ತುತ ಭಾರತ 9ನೇ ಸ್ಥಾನದಲ್ಲಿದೆ. ಅದೂ ಉತ್ತರ ಭಾರತದಿಂದ ಹೆಚ್ಚು ರಫ್ತಾಗುತ್ತಿದೆ. ಸ್ಥಳೀಯವಾದ ದವಸಧಾನ್ಯ ಬೆಳೆಗೆ ಪ್ರಧಾನಿ ಮೋದಿ ಉತ್ತೇಜನ ನೀಡುತ್ತಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಶಾಸಕರಾದ ರಘುಪತಿ ಭಟ್ ಮತ್ತು ಲಾಲಾಜಿ ಮೆಂಡನ್, ಪಕ್ಷ ಪ್ರಮುಖರಾದ ಯಶಪಾಲ ಸುವರ್ಣ, ಉದಯಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!