Tuesday, May 17, 2022
Home ಸಮಾಚಾರ ರಾಜ್ಯ ವಾರ್ತೆ ಲೋಕ ಸುಭಿಕ್ಷೆ ಪ್ರಾರ್ಥಿಸಿ ಕೃಷ್ಣ ಪೂಜೆ

ಲೋಕ ಸುಭಿಕ್ಷೆ ಪ್ರಾರ್ಥಿಸಿ ಕೃಷ್ಣ ಪೂಜೆ

ಸುದ್ದಿಕಿರಣ ವರದಿ
ಮಂಗಳವಾರ, ಜನವರಿ 18

ಲೋಕ ಸುಭಿಕ್ಷೆ ಪ್ರಾರ್ಥಿಸಿ ಕೃಷ್ಣ ಪೂಜೆ
ಉಡುಪಿ: ವಿಶ್ವವನ್ನೇ ಕಾಡುತ್ತಿರುವ ಕೊರೊನಾ ಆದಷ್ಟು ಬೇಗ ನಿರ್ಮೂಲನೆಯಾಗಲಿ, ಲೋಕ ಸುಭಿಕ್ಷೆಯಾಗಲಿ ಎಂದು ಅನುದಿನವೂ ಪ್ರಾರ್ಥಿಸಿ ಶ್ರೀಕೃಷ್ಣ ಪೂಜೆ ನಡೆಸಲಾಗುವುದು ಎಂದು ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಹೇಳಿದರು.

ಮಂಗಳವಾರ ದ್ವೈವಾರ್ಷಿಕ ಶ್ರೀಕೃಷ್ಣಪೂಜಾ ಪರ್ಯಾಯ ಕೈಂಕರ್ಯ ಸ್ವೀಕರಿಸಿ, ರಾಜಾಂಗಣದ ಶ್ರೀ ಜನಾರ್ದನತೀರ್ಥ ವೇದಿಕೆಯ ದರ್ಬಾರ್ ಸಭೆಯಲ್ಲಿ ಮಾತನಾಡಿದರು.

ತುಳಸಿ ಅರ್ಚನೆ, ಭಜನೆ
ತನಗಾಗಿ ಯಾಚಿಸುವುದು ಸರಿಯಲ್ಲ. ಆದರೆ, ಏಕಾಂತ ಭಕ್ತರಾದ ಗುರುಗಳ ಮೂಲಕ ಪ್ರಾರ್ಥಿಸುವುದು ತಪ್ಪಾಗದು ಎಂದ ಶ್ರೀಪಾದರು, ಎಲ್ಲರೂ ಸರ್ವರ ಕ್ಷೇಮಕ್ಕಾಗಿ ಪ್ರಾರ್ಥಿಸುವಂತೆ ವಿನಂತಿಸಿದರು.

ನಿಷ್ಕಾಮ ಭಾವದಿಂದ ಕೃಷ್ಣ ಸೇವೆ ಹಮ್ಮಿಕೊಳ್ಳುವುದಾಗಿ ತಿಳಿಸಿದ ಶ್ರೀಪಾದರು, ಶ್ರೀಕೃಷ್ಣನಿಗೆ ನಿತ್ಯವೂ ಸಹಸ್ರ ತುಳಸಿ ಅರ್ಚನೆ ಹಾಗೂ ಹಗಲು ಹೊತ್ತಿನಲ್ಲಿ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲುದ್ದೇಶಿಸಿರುವುದಾಗಿ ತಿಳಿಸಿದರು.
ಪರ್ಯಾಯ ಮಹೋತ್ಸವದ ಪಂಚಶತಮಾನೋತ್ಸವ ಹಿನ್ನೆಲೆಯಲ್ಲಿ ಜ್ಞಾನಪ್ರದವಾದ ಗ್ರಂಥ ಪ್ರಕಟಣೆ ಹಮ್ಮಿಕೊಳ್ಳಲುದ್ದೇಶಿಸಲಾಗಿದೆ.
ಭಕ್ತರ ಸಹಕಾರದಿಂದ ಭಕ್ತರ ನಿರೀಕ್ಷೆಯ ಕಾರ್ಯಗಳೆಲ್ಲವೂ ಸಾಕಾರಗೊಳ್ಳುವ ವಿಶ್ವಾಸವಿದೆ ಎಂದರು.

ಭಕ್ತಿಜ್ಞಾನಗಳು ಮೋಕ್ಷಪ್ರದ
ಸಾನ್ನಿಧ್ಯ ವಹಿಸಿದ್ದ ನಿರ್ಗಮನ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ನಿಸ್ವಾರ್ಥ ಮನೋಭಾವದಿಂದ ಭಗವದಾರಾಧನೆ ಮಾಡಿದಾಗ ಶ್ರೇಯಸ್ಸುಂಟಾಗುತ್ತದೆ. ಐಹಿಕ ಸುಖಭೋಗಗಳೆಲ್ಲವೂ ಅಶಾಶ್ವತ, ಭಕ್ತಿಜ್ಞಾನಗಳೇ ಮೋಕ್ಷಪ್ರದ ಎಂಬ ಚಿಂತನೆಯಿಂದ ವರ್ತಿಸಬೇಕು. ತ್ಯಾಗ ಭಾವದಿಂದ ಲೋಕಕ್ಷೇಮ ಸಾಧ್ಯ ಎಂದರು.

ತ್ಯಾಗಿಯಿಂದ ತ್ಯಾಗಿಗೆ
ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಉಡುಪಿಗೇ ವಿಶಿಷ್ಟವಾದ ಪರ್ಯಾಯ ಕ್ರಮ ತ್ಯಾಗಿಯೋರ್ವ ಮತ್ತೋರ್ವ ತ್ಯಾಗಿಗೆ ಕೃಷ್ಣಪೂಜಾಧಿಕಾರ ಹಸ್ತಾಂತರಿಸುವ ಪ್ರಕ್ರಿಯೆ. ಇಲ್ಲಿ ಭೋಗ ಎಂಬುದಿಲ್ಲ. ಸಮಾಜದಿಂದ ಸಂಗ್ರಹಿಸಿದ್ದನ್ನು ಕೃಷ್ಣ ಪ್ರಸಾದ ರೂಪವಾಗಿ ಮತ್ತೆ ಸಮಾಜಕ್ಕೆ ಹಂಚುವ ಪ್ರಕ್ರಿಯೆ ಎಂದರು.
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಮತ್ತು ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಸಂದೇಶ ನೀಡಿದರು.
ಅಭ್ಯಾಗತರಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಾಜಿ ಸಚಿವರಾದ ಅಭಯಚಂದ್ರ ಜೈನ್ ಮತ್ತು ವಿನಯ ಕುಮಾರ್ ಸೊರಕೆ, ಉಚ್ಛ ನ್ಯಾಯಾಯಲಯದ ನ್ಯಾ| ದಿನೇಶಕುಮಾರ್, ಕರ್ಣಾಟಕ ಬ್ಯಾಂಕ್ ಎಂ.ಡಿ. ಮಹಾಬಲೇಶ್ವರ ರಾವ್, ಎಸ್.ಬಿ.ಐ. ಎಂ.ಡಿ. ಸುನಿಲ್ ಪರಾಂಜಪೆ, ಎಲ್.ಐಸಿ ಉಡುಪಿ ವಿಭಾಗಾಧಿಕಾರಿ ಬಿಂದು ರಾಬರ್ಟ್, ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಶ್ಯಾಮಲಾ ಕುಂದರ್ ಆಗಮಿಸಿದ್ದರು.

ಪರ್ಯಾಯ ಪುರಸ್ಕಾರ
ಈ ಸಂದರ್ಭದಲ್ಲಿ ದಿ| ವ್ಯಾಸ ಆಚಾರ್ಯ ಅವರಿಗೆ ನೀಡಲಾದ ಹರಿಸೇವಾಧುರಂದರ ಪ್ರಶಸ್ತಿಯನ್ನು ಅವರ ಪುತ್ರ ವ್ರಜನಾಥ ಆಚಾರ್ಯ, ವಿದ್ವಾಂಸ ಹರಿದಾಸ ಉಪಾಧ್ಯಾಯ ಅವರಿಗೆ ಶಾಸ್ತ್ರವಿಚಕ್ಷಣ ಮತ್ತು ಬೆಂಗಳೂರಿನ ಹೋಟೆಲ್ ಉದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್ ಅವರಿಗೆ ಸಮಾಜಸೇವಾ ಧುರೀಣ ಪರ್ಯಾಯ ದರ್ಬಾರ್ ಸಂಮಾನ ಪುರಸ್ಕಾರ ನೀಡಲಾಯಿತು.
ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶಾಸಕ ರಘುಪತಿ ಭಟ್ ಸ್ವಾಗತಿಸಿದರು. ಗೌರವಾಧ್ಯಕ್ಷ ಕುಂಭಾಶಿ ಸೂರ್ಯನಾರಾಯಣ ಉಪಾಧ್ಯಾಯ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರು ವಂದಿಸಿದರು. ಜಿ. ವಾಸುದೇವ ಭಟ್ ಪೆರಂಪಳ್ಳಿ ನಿರೂಪಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಪ್ರಸಾದ ಸಮರ್ಪಣೆ, ಪರ್ಯಾಯ ಕೃಷ್ಣಾಪುರ ಮಠದ ಅಧಿಕಾರಿ ವರ್ಗದ ಮತ್ತು ಆಸ್ಥಾನ ವಿದ್ವಾಂಸರ ಘೋಷಣೆ ನಡೆಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!