Monday, August 15, 2022
Home ಕ್ರೀಡೆ ಸೈನಿಕ ಶಕ್ತಿ ಅನಾವರಣಗೊಂಡ ದಿನ ಸ್ಮರಣೀಯ

ಸೈನಿಕ ಶಕ್ತಿ ಅನಾವರಣಗೊಂಡ ದಿನ ಸ್ಮರಣೀಯ

ಸುದ್ದಿಕಿರಣ ವರದಿ
ಮಂಗಳವಾರ, ಜುಲೈ 26

ಸೈನಿಕ ಶಕ್ತಿ ಅನಾವರಣಗೊಂಡ ದಿನ ಸ್ಮರಣೀಯ
ಮಂಗಳೂರು: ಭಾರತದ ಯೋಧರ ಅಸೀಮ ಸಾಹಸ, ಪರಾಕ್ರಮ ಜಗತ್ತಿನೆದುರು ತೆರೆದಿಟ್ಟ ದಿನವನ್ನು ಪ್ರತಿಯೊಬ್ಬ ಭಾರತೀಯರೂ ನೆನೆಯಲೇಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಶಾಸಕರ ನೇತೃತ್ವದಲ್ಲಿ ರಥಬೀದಿ ಡಾ| ಪಿ. ದಯಾನಂದ ಪೈ- ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾರ್ಗಿಲ್ ವಿಜಯ ದಿವಸ್ ಮತ್ತು ಅಗ್ನಿಪಥ್ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸೈನಿಕ ಶಕ್ತಿಯನ್ನು ಅನಾವರಣಗೊಳಿಸಿದ ಕಾರ್ಗಿಲ್ ವಿಜಯ ಅತ್ಯಂತ ಮಹತ್ವಪೂರ್ಣವಾದದ್ದು. ಯುದ್ಧದಲ್ಲಿ ಹುತಾತ್ಮರಾದ ಎಲ್ಲಾ ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದವರು ಹೇಳಿದರು.

ಕೇಂದ್ರ ಸರಕಾರ, ಸೈನ್ಯಕ್ಕೆ ಕಾಶ್ಮೀರದ ವಿಚಾರದಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಬಳಿಕ ಸೈನಿಕರ ಮೇಲೆ ನಡೆಯುತಿದ್ದ ದಾಳಿ, ನಿರಂತರ ಕಲ್ಲು ತೂರಾಟಗಳು ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಒಂದು ಕಾಲದಲ್ಲಿ ಗಡಿ ಭಾಗದಲ್ಲಿ ಪಾಕಿಸ್ಥಾನದಿಂದ ಕಿರುಕುಳ ಅನುಭವಿಸುತಿದ್ದ ಸೈನಿಕರು ಇಂದು ಅಂಥ ದಾಳಿಗೆ ಪ್ರತಿಯಾಗಿ ಸೂಕ್ತ ಪ್ರತ್ಯುತ್ತರ ನೀಡುತ್ತಿದ್ದಾರೆ ಎಂದು ಶಾಸಕ ಕಾಮತ್ ಹೇಳಿದರು.

ಸಂಪನ್ಮೂಲವ್ಯಕ್ತಿಯಾಗಿದ್ದ ನೌಕಾ ಪಡೆಯ ನಿವೃತ್ತ ಸೈನಿಕ ವಿಜಯನ್, ಅಗ್ನಿಪಥ್ ಹಾಗೂ ಭಾರತೀಯ ಸೈನ್ಯಕ್ಕೆ ಸೇರುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಭಾರತೀಯ ಸೈನ್ಯದ ನಿವೃತ್ತ ಸೈನಿಕರಾದ ಮೂರು ಪಡೆಯ ಸೈನಿಕರನ್ನು ಸನ್ಮಾನಿಸಲಾಯಿತು.

ಕಾಲೇಜು ಪ್ರಾಂಶುಪಾಲ ಡಾ| ಜಯಕರ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಸೈನಿಕ ಶಿವರಾಮ ಭಟ್, ಕಾಲೇಜಿನ ಗಣಿತ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ನಿವೃತ್ತ ಸೈನಿಕ ಜೆಫ್ರಿ ರಾಡ್ರಿಗಸ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರಾಜೇಂದ್ರ ಕುಮಾರ್, ರಮೇಶ್ ಹೆಗ್ಡೆ ಮತ್ತು ರಾಮಚಂದ್ರ ಭಟ್, ವಿದ್ಯಾರ್ಥಿ ಕ್ಷೇಮಪಾಲಕ ಡಾ| ಸುಧಾಕರನ್ ಟಿ ಮತ್ತು ಡಾ| ನವೀನ್ ಕೊಣಾಜೆ ನಿರೂಪಿಸಿದರು.

ಲೋಹಿತ್ ಸ್ವಾಗತಿಸಿ, ಶಿವಾನಿ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!