ಸ್ಟಾರ್ ಕಿಡ್ಸ್ ಅವಾರ್ಡ್ ಪ್ರದಾನ
(ಸುದ್ದಿಕಿರಣ ವರದಿ)
ಬ್ರಹ್ಮಾವರ: ಉಡುಪಿ ಅಂಬಾಗಿಲು ರಿಸೋರ್ಸ್ ಸಂಸ್ಥೆ ಹಾಗು ಟೀಮ್ ಉದಯ್ ಶೆಟ್ಟಿ ಆಶ್ರಯದಲ್ಲಿ ಹಾರಾಡಿ ಜಿ. ಎಂ. ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಸ್ಟಾರ್ ಕಿಡ್ ಅವಾರ್ಡ್ ಪ್ರದಾನ ಸಮಾರಂಭ ಮತ್ತು ವರಮಾನ ಗಳಿಕೆಯಲ್ಲಿ ನೇರ ಮಾರುಕಟ್ಟೆ ವ್ಯವಸ್ಥೆಯಲ್ಲಿ ಅವಕಾಶಗಳು ಕುರಿತ ಮಾಹಿತಿ ಶಿಬಿರ ನಡೆಯಿತು.
ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಇರುವ ಮಕ್ಕಳಿಗೆ ಆನ್ ಲೈನ್ ಮೂಲಕ ನಡೆಸಿದ ವಿಭಿನ್ನ ಸ್ಪರ್ಧೆಯಲ್ಲಿ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ 300ಕ್ಕೂ ಅಧಿಕ ಮಂದಿ ಮಕ್ಕಳು ಭಾಗವಹಿಸಿದ್ದರು.
ವಿಜೇತ ಮಕ್ಕಳು ಮತ್ತು ಪೋಷಕರಿಗೆ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸುವ ಕಾರ್ಯಕ್ರಮವನ್ನು ಮೋದಿ ಕೇರ್ ನೆಟ್ ವರ್ಕ್ ಸಂಸ್ಥೆಯ ಯುವ ರಾಯಭಾರಿ ರಾಘವೇಂದ್ರ ಶೆಟ್ಟಿ ನೆರವೇರಿಸಿ, ಭಾರತೀಯ ಯುವ ಶಕ್ತಿ ಇಂದು ಲಕ್ಷ, ಕೋಟಿ ಖರ್ಚು ಮಾಡಿ ಕೇವಲ ಸಾವಿರ ರೂ. ಸಂಬಳಕ್ಕೆ ಸೀಮಿತವಾಗುತ್ತಿದೆ. ಭಾರತದಲ್ಲಿ ಅಂಕ, ಪದವಿ, ವಿಧ್ಯಾಭ್ಯಾಸ, ಅನುಭವ ಇತ್ಯಾದಿ ಯಾವುದೇ ಹಿನ್ನೆಲೆ ಇಲ್ಲದೇ ಲಕ್ಷಾಂತರ ರೂ. ಗಳಿಸಲು, ಐಷಾರಾಮಿ ಜೀವನ ನಡೆಸಲು ಸಾಕಷ್ಟು ದಾರಿಗಳಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿ. ಎಂ. ವಿದ್ಯಾನಿಕೇತನ ಸಂಸ್ಥೆ ಮುಖ್ಯಸ್ಥ ಪ್ರಕಾಶ್ಚಂದ್ರ ಶೆಟ್ಟಿ, ವೇಗವಾಗಿ ಸಾಗುತ್ತಿರುವ ಜಗತ್ತಿನ ವ್ಯವಸ್ಥೆಯಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯಬೇಕಾದ ಸಕಾರಾತ್ಮಕ ಬದಲಾವಣೆ ಕುರಿತು ವಿಚಾರ ಮಂಡಿಸಿದರು.
ಮುಖ್ಯ ಅತಿಥಿಯಾಗಿದ್ದ ವೆಸ್ಟ್ ಇಂಡೀಸ್ ಮೆಡಿಕಲ್ ಯುನಿವರ್ಸಿಟಿ ಉಪಕುಲಪತಿ ಡಾ. ಶಿವಾನಂದ ನಾಯಕ್ ಪೌಷ್ಠಿಕ ಆಹಾರ, ಅಹಾರ ಸಂಸ್ಕೃತಿ, ಸಾತ್ವಿಕ ಆಹಾರ ಪದ್ಧತಿಯ ಅಗತ್ಯತೆ ಕುರಿತು ಮಾಹಿತಿ ನೀಡಿದರು.
ವಿಶೇಷ ಅತಿಥಿಗಳಾಗಿದ್ದ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ ರೋಹಿತಾಶ್ವ ಸುಣ್ಣಾಜೆ, ಜಾನ್ಸನ್ ವಿ.ಜೆ. ಅವರನ್ನು ಗೌರವಿಸಲಾಯಿತು.
ರಿಸೋರ್ಸ್ ಸಂಸ್ಥೆ ಮುಖ್ಯಸ್ಥ ಉದಯ್ ಶೆಟ್ಟಿ ಮಾತನಾಡಿ, ಇಂದಿನ ವ್ಯವಸ್ಥೆಯಲ್ಲಿ ಸ್ವದೇಶಿ ವಸ್ತುಗಳ ಬಳಕೆ, ನೇರ ಮಾರುಕಟ್ಟೆ ವ್ಯವಸ್ಥೆ ಮತ್ತು ಅದರಲ್ಲಿ ಉತ್ತಮ ವರಮಾನ ಗಳಿಕೆಯ ಬಗೆಯನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಟೀಮ್ ಉದಯ್ ಶೆಟ್ಟಿ ತಂಡದ ಸಾಧಕರನ್ನು ಗೌರವಿಸಲಾಯಿತು.
ರಿಸೋರ್ಸ್ ಸಂಸ್ಥೆಯ ರಶ್ಮಿ ಶೆಣೈ ಮತ್ತು ಕುಮಾರೇಶ್ ನಿರೂಪಿಸಿದರು