Wednesday, August 10, 2022
Home ಸಮಾಚಾರ ರಾಜ್ಯ ವಾರ್ತೆ ಹಠ ಮಾಡದೇ ಕಾಲೇಜಿಗೆ ಬನ್ನಿ: ಹಿಜಾಬ್ ವಿವಾದಿತ ವಿದ್ಯಾರ್ಥಿನಿಯರಿಗೆ ಮ‌ನವಿ

ಹಠ ಮಾಡದೇ ಕಾಲೇಜಿಗೆ ಬನ್ನಿ: ಹಿಜಾಬ್ ವಿವಾದಿತ ವಿದ್ಯಾರ್ಥಿನಿಯರಿಗೆ ಮ‌ನವಿ

ಸುದ್ದಿಕಿರಣ ವರದಿ
ಮಂಗಳವಾರ, ಮಾರ್ಚ್ 15

ಹಠ ಮಾಡದೇ ಕಾಲೇಜಿಗೆ ಬನ್ನಿ: ಹಿಜಾಬ್ ವಿವಾದಿತ ವಿದ್ಯಾರ್ಥಿನಿಯರಿಗೆ ಮ‌ನವಿ
ಬೆಂಗಳೂರು: ಹಿಜಾಬ್ ಧರಿಸಿಯೇ ತರಗತಿಗೆ ಹಾಜರಾಗುವುದಾಗಿ ಪಟ್ಟು ಹಿಡಿದಿದ್ದ 6 ಮಂದಿ ವಿದ್ಯಾರ್ಥಿನಿಯರು ಹಠ ಮಾಡದೇ ಕಾಲೇಜಿಗೆ ಬರುವಂತೆ ಉಡುಪಿ ಶಾಸಕ ರಘುಪತಿ ಭಟ್ ಮನವಿ ಮಾಡಿದ್ದಾರೆ.

ಹಿಜಾಬ್ ವಿವಾದ ಕುರಿತ ಕೋರ್ಟ್ ತೀರ್ಪಿನ ತರುವಾಯ ಇಲ್ಲಿನ ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸುವ ಜೊತೆಗೆ ಸಂತೋಷ ವ್ಯಕ್ತಪಡಿಸುವುದಾಗಿ ತಿಳಿಸಿದ ಶಾಸಕ ಭಟ್, ಉಚ್ಛ ನ್ಯಾಯಾಲಯದ ತ್ರಿಸದಸ್ಯ ಪೀಠದ ತೀರ್ಪನ್ನು ಎಲ್ಲರೂ ಪಾಲಿಸಬೇಕು.

ಹಿಜಾಬ್ ವಿವಾದ ಆರಂಭಗೊಂಡ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ 6 ಮಂದಿ ವಿದ್ಯಾರ್ಥಿನಿಯರು ಹಠ ಮಾಡದೇ ಕಾಲೇಜಿಗೆ ಬರಬೇಕು. ಅವರೆಲ್ಲರಿಗೂ ಸಮಾನ ಶಿಕ್ಷಣ ನೀಡುವುದಾಗಿ ತಿಳಿಸಿದರು.

ವಿವಾದದಿಂದಾಗಿ ಇಷ್ಟು ದಿನ ಅವರ ಶಿಕ್ಷಣಕ್ಕೆ ಸಮಸ್ಯೆ ಆಗಿದ್ದಲ್ಲಿ ಅವರಿಗೆ ಪ್ರತ್ಯೇಕ ನೋಟ್ಸ್ ನೀಡಲಾಗುತ್ತದೆ ಎಂದೂ ಆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ರಘುಪತಿ ಭಟ್ ಭರವಸೆ ನೀಡಿದ್ದಾರೆ.

ಹೈಕೋರ್ಟ್ ತ್ರಿ ಸದಸ್ಯ ಪೀಠ ಕೂಲಂಕಷ ವಿಚಾರಣೆ ನಡೆಸಿ ತೀರ್ಪು ನೀಡಿದೆ. ಆ ತ್ರಿ ಸದಸ್ಯ ಪೀಠದಲ್ಲಿ ಓರ್ವರು ಮುಸ್ಲಿಂ ನ್ಯಾಯಾಧೀಶರೂ ಇದ್ದರು ಎನ್ನುವುದೂ ಗಮನೀಯ. ಇದೊಂದು ಐತಿಹಾಸಿಕ ತೀರ್ಪು.

ಮುಂದೆ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಮಾಡಲು ಅವಕಾಶ ಇದೆ. ಆದರೆ, ರಾಷ್ಟ್ರ ಮಟ್ಟದಲ್ಲಿ ಮತ್ತೆ ಈ ವಿವಾದವನ್ನು ತೆಗೆದುಕೊಂಡು ಹೋಗಿ ಹಿಂದೂ- ಮುಸ್ಲಿಂರ ಮಧ್ಯೆ ಕಂದಕ ಮೂಡಿಸಬಾರದು ಎಂದೂ ಮನವಿ ಮಾಡಿದ್ದಾರೆ.

ಐತಿಹಾಸಿಕ ತೀರ್ಪು
ಹಿಜಬ್ ಇಸ್ಲಾಮಿನ ಅತ್ಯಗತ್ಯ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಜೊತೆಗೆ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿಹಿಡಿದಿದೆ.

ಎಲ್ಲರೂ ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್‌ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ. ಖಾಜಿ ನೇತೃತ್ವದ ಪೀಠ ಮನವಿ ಮಾಡಿದೆ.

ಅಷ್ಟೇ ಅಲ್ಲದೇ ಸರ್ಕಾರದ ಆದೇಶವನ್ನು ಪ್ರಶ್ನಿಸಿ ತರಗತಿಗಳಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಪೀಠ ವಜಾ ಮಾಡಿದೆ ಎಂದು ಶಾಸಕ ಭಟ್ ತಿಳಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!