Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಹಿಂದುತ್ವ ಮತ್ತು ಅಭಿವೃದ್ಧಿ ನನ್ನ ಮೊದಲ ಆಯ್ಕೆ

ಹಿಂದುತ್ವ ಮತ್ತು ಅಭಿವೃದ್ಧಿ ನನ್ನ ಮೊದಲ ಆಯ್ಕೆ

ಹಿಂದುತ್ವ ಮತ್ತು ಅಭಿವೃದ್ಧಿ ನನ್ನ ಮೊದಲ ಆಯ್ಕೆ

(ಸುದ್ದಿಕಿರಣ ವರದಿ)
ಉಡುಪಿ: ಹಿಂದುತ್ವ ಮತ್ತು ಅಭಿವೃದ್ಧಿ ನನ್ನ ಮೊದಲ ಆಯ್ಕೆ. ಸಚಿವ, ಶಾಸಕ ಸ್ಥಾನ ಆ ನಂತರದ್ದು ಎಂದು ಸಂಪುಟ ದರ್ಜೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ಮುಖ್ಯಮಂತ್ರಿ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದು, ಪ್ರಮಾಣ ವಚನ ಸ್ವೀಕರಿಸಿದ ನಂತರ, ಶುಕ್ರವಾರ ಮೊದಲ ಬಾರಿಗೆ ಉಡುಪಿ ಜಿಲ್ಲೆಗಾಗಮಿಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂಂದಿಗೆ ಮಾತನಾಡಿದರು.

ಹಿಂದುತ್ವದ ವಿಚಾರದಲ್ಲಿ ಯಾವುದೇ ಹಂತದಲ್ಲೂ ರಾಜಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಯಾವುದೇ ಖಾತೆಯಾದರೂ ಸೈ
ಸಚಿವನಾಗಿ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸುತ್ತಿದ್ದೇನೆ. ಉಡುಪಿಗೆ ಬರುತ್ತಿರುವುದು ಸಂತೋಷ, ಭಾವನಾತ್ಮಕ ಕ್ಷಣ. ಕಾರ್ಕಳ ಕ್ಷೇತ್ರದ ಜನ ಮೂರು ಬಾರಿ ಆಯ್ಕೆ ಮಾಡಿದ್ದರಿಂದ ಸಚಿವನಾದೆ. ಪಕ್ಷ ದೊಡ್ಡ ಪ್ರಮಾಣದ ಹೊಣೆಗಾರಿಕೆಯನ್ನು ಹೆಗಲಿಗೇರಿಸಿದೆ. ಸಿಎಂ ಮತ್ತು ಪಕ್ಷದ ಹಿರಿಯರು ನಿರೀಕ್ಷೆಯಿಟ್ಟು ಸ್ಥಾನ ಕೊಟ್ಟಿದ್ದಾರೆ. ಜವಾಬ್ದಾರಿ ನಿಭಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ನನಗೆ ಇಷ್ಟದ ಖಾತೆ ಎಂಬುದು ಯಾವುದೂ ಇಲ್ಲ, ಮುಖ್ಯಮಂತ್ರಿ ಕೊಟ್ಟ ಖಾತೆಯ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಸಚಿವ ಸುನಿಲ್ ತಿಳಿಸಿದರು.

ಹಾಲಾಡಿಯವರನ್ನು ಪಕ್ಷ ಗುರುತಿಸುತ್ತದೆ
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಪಕ್ಷ ಗೌರವ ಕೊಟ್ಟಿದೆ. ಅವರಿಗೆ ಇನ್ನಷ್ಟು ಗೌರವ ಸಿಗಬೇಕು ಎಂಬ ನಿರೀಕ್ಷೆ ಸಹಜ. ಬಿಜೆಪಿ ಹಾಲಾಡಿಯವರನ್ನು ಖಂಡಿತ ಗುರುತಿಸುತ್ತದೆ. ಪಕ್ಷ ಅವರನ್ನು ಕರೆದು ಮಾತನಾಡಿಸುತ್ತದೆ. ಸಚಿವನಾಗಿ ನಾನು ಮಾಡುವ ಕೆಲಸಕ್ಕೆ ಶ್ರೀನಿವಾಸ ಶೆಟ್ಟರ ಬೆಂಬಲ ಬೇಕು. ಸಚಿವ ಶ್ರೀನಿವಾಸ ಪೂಜಾರಿ, ಅಂಗಾರ ಅವರ ಮಾರ್ಗದರ್ಶನದಲ್ಲಿ ನಾನು ನಡೆಯುತ್ತೇನೆ ಎಂದು ಸಚಿವ ಸುನಿಲ್ ಕುಮಾರ್ ವಿನೀತನಾಗಿ ಹೇಳಿದರು.

ವಿಜಯೇಂದ್ರಗೆ ಸೂಕ್ತ ಸ್ಥಾನಮಾನ ಕುರಿತ ಪ್ರಶ್ನೆಗೆ ಉತ್ತರಿಸಿ, ಬಿಜೆಪಿ ಹೈಕಮಾಂಡ್ ಅದನ್ನು ತೀರ್ಮಾನಿಸುತ್ತದೆ.

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಲ್ಲಿ ಚರ್ಚೆ ಇಲ್ಲ. ನಳಿನ್ ಕುಮಾರ್ ಕಟೀಲ್ ಅವರೇ ನಮ್ಮ ಅಧ್ಯಕ್ಷರು ಎಂದರು ಸುನಿಲ್ ಕುಮಾರ್.

ಇಡಿ ದಾಳಿ ಕಾಂಗ್ರೆಸ್ ಗೊಂದಲದ ಭಾಗ
ಶಾಸಕ ಜಮೀರ್ ಅಹಮ್ಮದ್ ಮೇಲೆ ಇಡಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಆಂತರಿಕವಾಗಿ ಗೊಂದಲದ ಗೂಡಾಗಿದೆ. ಪರಮೇಶ್ವರ್, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅದು ಬೇರೆ ಬೇರೆ ಗುಂಪುಗಳಿವೆ. ಕಾಂಗ್ರೆಸ್ಸಿನ ಗುಂಪುಗಳು ಪರಸ್ಪರ ವೈರತ್ವ ಸಾಧಿಸುತ್ತಿವೆ. ಕಾಂಗ್ರೆಸ್ ಗೊಂದಲ ಆಗಾಗ ಒಂದೊಂದಾಗಿ ಬಹಿರಂಗ ಆಗುತ್ತಿದೆ. ಜಮೀರ್ ಅಹಮ್ಮದ್ ಪ್ರಕರಣ ಕೂಡಾ ಆಂತರಿಕ ಗೊಂದಲದ ಒಂದು ಭಾಗ ಎಂದು ಸಚಿವ ಸುನಿಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಸಕರಾದ ಹರೀಶ್ ಪೂಂಜಾ ಮತ್ತು ಡಾ. ಭರತ್ ಶೆಟ್ಟಿ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!