Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಹಿಜಾಬ್ ಧರಿಸಿದ 6 ಮಂದಿ ವಿದ್ಯಾರ್ಥಿನಿಯರ ಪ್ರವೇಶ ನಿರಾಕರಣೆ

ಹಿಜಾಬ್ ಧರಿಸಿದ 6 ಮಂದಿ ವಿದ್ಯಾರ್ಥಿನಿಯರ ಪ್ರವೇಶ ನಿರಾಕರಣೆ

ಹಿಜಾಬ್ ಧರಿಸಿದ 6 ಮಂದಿ ವಿದ್ಯಾರ್ಥಿನಿಯರ ಪ್ರವೇಶ ನಿರಾಕರಣೆ

ಉಡುಪಿ: ಇಲ್ಲಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ಕಾರಣಕ್ಕೆ 6 ಮಂದಿ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಹೇಳಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಮುಸ್ಲಿಂ ವಿದ್ಯಾರ್ಥಿನಿಯರು `ಕಳೆದ ವರ್ಷ ವಿಜ್ಞಾನ ವಿಭಾಗದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಮತಿ ನೀಡಲಾಗಿತ್ತು. ಈ ವರ್ಷ ಅನುಮತಿ ನೀಡುತ್ತಿಲ್ಲ. ಹಿಜಾಬ್ ಹಾಕಿದ್ದಕ್ಕೆ ತರಗತಿಗೆ ಸೇರಿಸುತ್ತಿಲ್ಲ. ಹಾಜರಾತಿಯನ್ನೂ ನೀಡುತ್ತಿಲ್ಲ. ಕಳೆದ ಮೂರು ದಿನಗಳಿಂದ ಕೊಠಡಿಯ ಹೊರಗೆ ನಿಂತು, ಅಲ್ಲಿಯೇ ಊಟ ಮಾಡಿ ಮನೆಗೆ ತೆರಳುತ್ತಿದ್ದೇವೆ’ ಎಂದು ತಮ್ಮ ಅಳಲು ತೋಡಿಕೊಂಡರು.

ಪೋಷಕರನ್ನು ಕಾಲೇಜಿಗೆ ಕರೆದುಕೊಂಡು ಬರಲು ಪ್ರಾಂಶುಪಾಲರು ಸೂಚಿಸಿದ್ದರು. ಕರೆದುಕೊಂಡು ಬಂದರೆ ಮಾತನಾಡದೆ ಕಡೆಗಣಿಸಲಾಗುತ್ತಿದೆ. ನಮಗೆ ಹಾಜರಾತಿ ಕೊರತೆ ಎದುರಾಗುವ ಭೀತಿ ಇದೆ’ ಎಂದು ವಿದ್ಯಾರ್ಥಿನಿಯರು ತಿಳಿಸಿದರು.

ಖಂಡನೆ
ಸುದ್ದಿ ತಿಳಿಯುತ್ತಿದ್ದಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಕಾಲೇಜಿಗೆ ಭೇಟಿ ನೀಡಿ, `ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶಕ್ಕೆ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.

`ಹಿಜಾಬ್ ಧರಿಸಿದ ಕಾರಣಕ್ಕೆ ತರಗತಿಯಿಂದ ಹೊರಹಾಕಿರುವುದು ಖಂಡನೀಯ. ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನಲ್ಲಿ ಮುಕ್ತವಾಗಿ ಧರ್ಮ ಪ್ರತಿಪಾದಿಸುವ, ಆಚರಿಸುವ ಹಕ್ಕು ನೀಡಲಾಗಿದೆ. ಮುಸ್ಲಿಂ ಮಹಿಳೆ ಹಿಜಾಬ್ ಧರಿಸುವುದು ಧಾರ್ಮಿಕ ನಂಬಿಕೆಯಾಗಿದ್ದು, ಅವರ ಹಕ್ಕನ್ನು ಕಸಿದುಕೊಳ್ಳಬಾರದು’ ಎಂದರು.

ಘಟನೆ ಸಂಬಂಧ ಕಾಲೇಜು ಪ್ರಾಂಶುಪಾಲರು ಹಾಗೂ ಡಿಡಿಪಿಯು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಎಸ್.ಡಿಪಿಐ ಖಂಡನೆ
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ಕಾರಣಕ್ಕೆ ತರಗತಿಗೆ ಪ್ರವೇಶ ನಿರಾಕರಣೆ ಮಾಡಿರುವ ಪ್ರಾಂಶುಪಾಲರ ಕ್ರಮ ಖಂಡನೀಯ ಎಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ತಿಳಿಸಿದೆ.

ಹಿಜಾಬ್ ಧಾರ್ಮಿಕ ನಂಬಿಕೆಯ ಭಾಗವಾಗಿದ್ದು, ನಮ್ರತೆಯ ಚಿಹ್ನೆಯಾಗಿದೆ. ಧರ್ಮವನ್ನು ಮುಕ್ತವಾಗಿ ಪ್ರತಿಪಾದಿಸುವ, ಆಚರಿಸುವ ಮೂಲಭೂತ ಹಕ್ಕಿನ ಭಾಗವಾಗಿದೆ.

ಕಾಲೇಜು ಪ್ರಾಂಶುಪಾಲರ ಫ್ಯಾಸಿಸ್ಟ್ ಧೋರಣೆ ಖಂಡನೀಯ. ವಿದ್ಯಾರ್ಥಿನಿಯರಿಗೆ ತರಗತಿಗೆ ಹಾಜರಾಗಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ಮಾಡುವುದಾಗಿ ಎಸ್.ಡಿ.ಪಿ.ಐ ಜಿಲ್ಲಾ ಘಟಕದ ಅಧ್ಯಕ್ಷ ನಝೀರ್ ಅಹಮದ್ ಎಚ್ಚರಿಕೆ ನೀಡಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!