ಉಡುಪಿ: ಕರಾವಳಿ ಭಾಗದ ಮೀನುಗಾರರ ಬಹು ದಶಕಗಳ ಬೇಡಿಕೆಯಾಗಿದ್ದ ಹೆಜಮಾಡಿ ಬಂದರು ಕಾಮಗಾರಿಗೆ 180.84 ಕೋ. ರೂ. ಮಂಜೂರು ಮಾಡಿ, ಜ. 19ರಂದು ಕಾಮಗಾರಿ ಶಿಲಾನ್ಯಾಸ ನೆರವೇರಿಸಲು ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಮಸ್ತ ಮೀನುಗಾರರ ಪರವಾಗಿ ಸ್ವಾಗತಿಸುವುದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ತಿಳಿಸಿದ್ದಾರೆ.
ಕೊರೊನಾ ಸಂದರ್ಭದಲ್ಲಿಯೂ ಹೆಜಮಾಡಿ ಬಂದರಿಗೆ 180.84 ಕೋ. ರೂ. ಮಂಜೂರು ಮಾಡಿ ಕರಾವಳಿಯ ಮೀನುಗಾರಿಕೆ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಕಾಳಜಿ ಹಾಗೂ ಬದ್ಧತೆ ಪ್ರದರ್ಶಿಸಿದೆ.
ಈ ಕಾಮಗಾರಿ ಮಂಜೂರಿಗೆ ಆಸಕ್ತಿ ವಹಿಸಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಬಂದರು ಸಚಿವ ನಿತಿನ್ ಗಡ್ಕರಿ, ಕೇಂದ್ರ ಮೀನುಗಾರಿಕೆ ಸಚಿವ ಗಿರಿರಾಜ್ ಸಿಂಗ್, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಸಂಸದರಾದ ನಳಿನ್ ಕುಮಾರ್ ಕಟೀಲು ಮತ್ತು ಶೋಭಾ ಕರಂದ್ಲಾಜೆ, ಮೀನುಗಾರ ಮುಂದಾಳು ನಾಡೋಜ ಡಾ| ಜಿ. ಶಂಕರ್, ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಅವರಿಗೆ ಅಭಿನಂದಿಸುವುದಾಗಿ ಯಶಪಾಲ್ ತಿಳಿಸಿದ್ದಾರೆ